

ಮಂಗಳೂರು: ಡ್ರಗ್ಸ್ ಅಪಾಯದ ಕುರಿತು ಯುವಕ ಯುವತಿಯರು ತಾವಾಗಿ ಎಚ್ಚರದಿಂದ ಇರುವ ಜತೆಗೆ ತಮ್ಮ ಗೆಳೆಯ ಗೆಳತಿಯರು ಕೂಡ ಅಡ್ಡದಾರಿ ಹಿಡಿಯದಂತೆ ಅವರಿಗೂ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರು ನಗರ ಪೊಲೀಸ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮಂಗಳೂರು ನಗರದಲ್ಲಿ ಬುಧವಾರ ಆಯೋಜಿಸಲಾದ ‘ಜತೆಯಾಗಿ ನಡೆಯೋಣ, ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್-2023’ಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದ ಎದುರು ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜ ಆರೋಗ್ಯಕರವಾಗಿರಬೇಕಾದರೆ ಡ್ರಗ್ಸ್ ನಿರ್ಮೂಲನೆ ಅಗತ್ಯ. ಡ್ರಗ್ಸ್ ಮುಕ್ತ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಯುವಕ-ಯುವತಿಯರ ಜವಾಬ್ದಾರಿ ಹಿರಿದಾಗಿದೆ. ಡ್ರಗ್ಸ್ ಆರಂಭದಲ್ಲಿ ಕುತೂಹಲ ಕೆರಳಿಸಿ ತಾತ್ಕಾಲಿಕ ಖುಷಿ ಕೊಡಬಹುದು. ಆದರೆ ಅನಂತರ ಅದು ಚಟವಾಗಿ ಬೆಳೆದು ಭವಿಷ್ಯವನ್ನೇ ನಾಶ ಮಾಡುತ್ತದೆ. ಮಂಗಳೂರು ನಗರ ಸೇರಿದಂತೆ ದ.ಕ ಜಿಲ್ಲೆಯನ್ನು ಡ್ರಗ್ಸ್ ಮುಕ್ತವಾಗಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈಗಾಗಲೇ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಾತನಾಡಿ, ಪಕ್ಕದ ಕೇರಳ ಮತ್ತು ಇತರ ಕಡೆಗಳ ಸಂಪರ್ಕದಿಂದ ಮಂಗಳೂರಿನಲ್ಲಿ ಡ್ರಗ್ಸ್ ಚಟುವಟಿಕೆಗಳು ನಡೆಯುತ್ತಿವೆ. ಡ್ರಗ್ಸ್‌ನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮೇಯರ್ ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್ ಕೆ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಮೇಯರ್‌ಗಳಾದ ಎಂ.ಶಶಿಧರ ಹೆಗ್ಡೆ, ಭಾಸ್ಕರ್ ಕೆ., ಪಾಲಿಕೆ ಸದಸ್ಯರಾದ ವಿನಯ್‌ರಾಜ್, ಅನಿಲ್ ಕುಮಾರ್, ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್ ಬಿ.ಪಿ. ಉಪಸ್ಥಿತರಿದ್ದರು. ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಸ್ವಾಗತಿಸಿದರು. 120 ಶಿಕ್ಷಣ ಸಂಸ್ಥೆಗಳ 4,000ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.