

ಮಂಗಳೂರು: ಡಿಸಿಎಂ ಮಾಡುವ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಬಹಿರಂಗವಾಗಿ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸೋತು ಸುಣ್ಣವಾಗಿರುವ ಸಿ.ಟಿ.ರವಿ ಸಲಹೆ ಬೇಕಾಗಿಲ್ಲ. ಸದಾ ಸುದ್ದಿಯಲ್ಲಿ ಇರಬೇಕು ಎನ್ನುವ ಕಾರಣಕ್ಕಾಗಿ ಅವರು ಏನೇನೋ ಹೇಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಸಿ.ಟಿ. ರವಿ ಅವರನ್ನು ವಿಧಾನಸಭೆಯಿಂದಲೂ ಜನ ಮನೆಗೆ ಕಳಿಸಿದ್ದಾರೆ. ಅವರ ಹೈಕಮಾಂಡ್‌ನವರು ಕೂಡಾ ವಾಪಸ್ ಕಳಿಸಿದ್ದಾರೆ. ಕಾಂಗ್ರೆಸ್ ಬಗ್ಗೆ ಅನವಶ್ಯಕವಾಗಿ ಬಾಯಿ ತೆಗೆಯೋದು ಸರಿಯಲ್ಲ. ಅವರಿಗೆ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ.
ಚುನಾವಣಾ ಪೂರ್ವದಲ್ಲಿಯೂ ನಮ್ಮಲ್ಲಿ ಒಗ್ಗಟ್ಟಿಲ್ಲ ಅಂತ ಹೇಳಿದ್ದರು. ಆದರೆ ನಾವು ಒಗ್ಗಟ್ಟಾಗಿ ಕೆಲಸ ಮಾಡಿ ಕೊನೆಗೆ ಏನಾಯ್ತು ಅಂತ ಗೊತ್ತಿದೆ. ಈಗಲೂ ಒಗ್ಗಟ್ಟಲ್ಲಿ ಇದ್ದೇವೆ, ರಾಜಕೀಯ ತೀರ್ಮಾನ ವರಿಷ್ಠರು ಮಾಡ್ತಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಸರಿಯಾಗಿ ಇದ್ದೇವೆ ಎಂದರು.
ಕಾವೇರಿ ವಿಚಾರದಲ್ಲಿ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ವಸ್ತುಸ್ಥಿತಿ ಅಧ್ಯಯನ ಮಾಡಿ ರಿಯಾಲಿಟಿ ಮೇಲೆ ಮುಂದುವರಿಯಬೇಕಿದೆ. ಈ ಸಲ ಮಳೆ ಕೂಡಾ ಕಡಿಮೆಯಾಗಿದ್ದು, ನಮ್ಮಲ್ಲೇ ನೀರು ಇಲ್ಲದ ಸ್ಥಿತಿ ಇದೆ. ರಾಜಕೀಯವಾಗಿ ಎಲ್ಲರೂ ಒಗ್ಗಟ್ಟಾಗಿ ಚರ್ಚಿಸಬೇಕಾಗಿದೆ. ನಮ್ಮ ರಾಜ್ಯದ ಸಂಸದರು ದೆಹಲಿಯಲ್ಲಿ ಮಾತನಾಡಬೇಕಿದೆ. ಈಗಾಗಲೇ ಸಿಎಂ ಅವರು ಪ್ರಧಾನಿ ಮೋದಿಯವರ ಸಮಯ ಕೇಳಿದ್ದಾರೆ. ಕೋರ್ಟ್ ಗಳು ಆದೇಶ ಕೊಡುತ್ತವೆ. ಆದರೆ ಕೆಲವು ವಿಚಾರಗಳಲ್ಲಿ ನಾವು ಜನರ ಪರ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಹುಕ್ಕಾ ಬಾರ್ ಗಳಿಂದ ಸಾರ್ವಜನಿಕರಿಗೆ ಅನಾರೋಗ್ಯ ಹೆಚ್ಚಾಗುತ್ತಿದೆ. ಹೀಗಾಗಿ ನಮ್ಮ ಕಾಯಿದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಬಯಸಿದ್ದೇವೆ. ಹುಕ್ಕಾ ಬಾರ್ ಬೇರೆ ಬೇರೆ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇರಬಾರದು. ಬಾರ್, ರೆಸ್ಟೋರೆಂಟ್ ಪರಿಸರದಲ್ಲಿ ಇವೆಲ್ಲ ಇರದಂತೆ ನೋಡಿಕೊಳ್ಳಬೇಕಾಗಿದೆ ಎಂದರು.