

ಮಂಗಳೂರು: ಕದ್ರಿ ಪಾರ್ಕ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ನಗರದ ಇತರ ಕಡೆಗಳಲ್ಲಿ ಮಂಗಳಮುಖಿಯರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅವರಿಗೆ ಉದ್ಯೋಗ ಕಲ್ಪಿಸಿ, ಮನ ಪರಿವರ್ತನೆಗೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯೆಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಅಹವಾಲು ವ್ಯಕ್ತವಾಯಿತು.
ರಾತ್ರಿ ವೇಳೆ ವಾಹನ ನಿಲ್ಲಿಸಿ ಪರ್ಸ್, ಚಿನ್ನಾಭರಣ ಲೂಟಿ ಮಾಡುತ್ತಿದ್ದಾರೆ. ಮದ್ಯ ಸೇವಿಸಿದ ಕೆಲವು ಯುವಕರು ಸುಲಭವಾಗಿ ಮಂಗಳಮುಖಿಯರ ಬಲೆಗೆ ಬಿದ್ದು ಸಮಸ್ಯೆ ತಂದುಕೊಳ್ಳುತ್ತಿದ್ದಾರೆ ಎಂದು ದಲಿತ ಮುಖಂಡ ಸದಾಶಿವ ಉರ್ವಸ್ಟೋರ್ ಹೇಳಿದರು.
ದಲಿತ ಮುಂದಾಳು ಗಿರೀಶ್ ಕುಮಾರ್ ಮಾತನಾಡಿ, ಕದ್ರಿ ಪಾರ್ಕ್ ಬಳಿ ವಾಹನ ನಿಧಾನಗೊಳಿಸಿದರೆ ಸಾಕು, ಅಲ್ಲಿಗೆ ಮಂಗಳಮುಖಿಯರು ಓಡೋಡಿ ಬಂದು ಪೀಡಿಸುತ್ತಾರೆ ಎಂದರು.
ಕೆಲವರು ಮಂಗಳಮುಖಿಯರಂತೆ ವೇಷ ಹಾಕಿ ಲೂಟಿ ಮಾಡುತ್ತಿದ್ದಾರೆ. ಈ ಹಿಂದೆ ಮಂಗಳಮುಖಿಯರಿಗೆ ಜಿಲ್ಲಾಡಳಿತದಿಂದ ಗುರುತಿನ ಕಾರ್ಡ್ ನೀಡಲಾಗಿತ್ತು. ಅದನ್ನು ಪರಿಶೀಲನೆ ನಡೆಸಬೇಕು ಎಂದು ದಲಿತ ಮುಂದಾಳು ಎಸ್.ಪಿ.ಆನಂದ ಅವರು ಒತ್ತಾಯಿಸಿದರು.
ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಈ ಸಮಸ್ಯೆಗೆ ಪರಿಹಾರ ಕ್ರಮವಾಗಬೇಕು ಎಂದು ವಿಶ್ವನಾಥ ಚೆಂಡ್ತಿಮಾರ್ ಹೇಳಿದರು. ಪೊಲೀಸ್, ಸಮಾಜ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುನರ್ವಸತಿಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಸದಾಶಿವ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರು, ಕದ್ರಿ ಪಾರ್ಕ್ ಬಳಿ ಮಂಗಳಮುಖಿಯರು ಸಾರ್ವಜನಿಕರಿಗೆ ತೊಂದರೆ ನೀಡದಂತೆ ಪೊಲೀಸ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ಹಗಲು ಮತ್ತು ರಾತ್ರಿ ಗಸ್ತಿನವರು ಆಗಾಗ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ಸಿಸಿ ಕೆಮರಾ ಅಳವಡಿಸಲಾಗಿದೆ. ಮಂಗಳಮುಖಿಯರನ್ನು ಠಾಣೆಗೆ ಕರೆಯಿಸಿ ಸಭೆ ನಡೆಸಿ ಸೂಕ್ತ ಎಚ್ಚರಿಕೆ ನೀಡಲಾಗಿದೆ. ಮೆಸ್ಕಾಂಗೆ ಪತ್ರ ಬರೆದು ಆ ಸ್ಥಳದಲ್ಲಿ ಬೀದಿದೀಪ ಅಳವಡಿಸಲಾಗಿದೆ. ಮಂಗಳಮುಖಿಯರನ್ನು ಆ ಸ್ಥಳದಿಂದ ಓಡಿಸಿದರೆ ಅವರು ಮತ್ತೊಂದು ಕಡೆಗೆ ಹೋಗಿ ಅದೇ ರೀತಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೆ. ಅವರಿಗೆ ಪುನರ್ವಸತಿ ವ್ಯವಸ್ಥೆಯ ಅಗತ್ಯವೂ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ವರದಿ ನೀಡಲಾಗುವುದು ಎಂದರು. ಮಂಗಳಮುಖಿಯರ ಐಡಿ ಕಾರ್ಡ್ ಪರಿಶೀಲನೆ ನಡೆಸುವಂತೆಯೂ ದಿನೇಶ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಲಿತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿ ಮಂಗಳೂರಿನಲ್ಲಿದ್ದರೂ ಅಲ್ಲಿ ಯಾವುದೇ ರೀತಿಯ ಸ್ಪಂದನೆ ದೊರೆಯುತ್ತಿಲ್ಲ ಎಂದು ಕೆಲವು ದಲಿತ ಮುಂದಾಳುಗಳು ದೂರಿದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೂರು ಕೊಟ್ಟವರನ್ನು ಮತ್ತು ಎದುರಿನ ಪಕ್ಷದವರನ್ನು ಕರೆಯಿಸಿ ಎರಡೂ ಕಡೆಯವರ ಸಮಕ್ಷಮ ವಿಚಾರಣೆ ನಡೆಸಬೇಕು. ಅಗತ್ಯವಿದ್ದರೆ ಎಫ್‌ಐಆರ್ ದಾಖಲಿಸಬೇಕು ಎಂದು ಡಿಸಿಪಿ ಸೂಚನೆ ನೀಡಿದರು.
ಕಿನ್ನಿಗೋಳಿಯಲ್ಲಿ ಶಾಲೆಗಳಿರುವ ಪರಿಸರದಲ್ಲಿ ರಸ್ತೆ ಬದಿ ಸಂತೆ ನಡೆಯುತ್ತಿದೆ. ಇತ್ತೀಚೆಗೆ ಅಲ್ಲಿ ಅಪಘಾತವೂ ಸಂಭವಿಸಿತ್ತು. ಈ ಹಿಂದೆ ಅಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರು ನಿಗಾ ವಹಿಸುತ್ತಿದ್ದರು. ಈಗ ಅಂತಹ ವ್ಯವಸ್ಥೆ ಇಲ್ಲದೆ ಅಪಾಯ ಉಂಟಾಗಿದೆ ಎಂದು ರಾಮಚಂದ್ರ ಅವರು ದೂರಿದರು. ಕಿನ್ನಿಗೋಳಿ ಪರಿಸರವೂ ಸೇರಿದಂತೆ ಹಲವೆಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಆದರೆ ಅದಕ್ಕೆ ಬಿಳಿ ಬಣ್ಣ ಬಳಿಯದೆ ವಾಹನ ಚಾಲಕರು ತೊಂದರೆಗೆ ಸಿಲುಕುತ್ತಿದ್ದಾರೆ ಎಂದು ಶಂಕರ್ ಮಾಸ್ಟರ್ ದೂರಿದರು.
ದಲಿತರ ಕಾಲನಿಗಳಲ್ಲಿ ತಿಂಗಳಿಗೊಮ್ಮೆ ಪೊಲೀಸರು ಸಭೆ ನಡೆಸಬೇಕು ಎಂದು ನಾಗೇಶ್ ಕೈರಂಗಳ ಒತ್ತಾಯಿಸಿದರು. ಈ ಹಿಂದೆ ನಡೆಯುತ್ತಿದ್ದಂತೆಯೇ ಪ್ರತಿ ತಿಂಗಳು ಸಭೆ ನಡೆಸುವಂತೆ ಡಿಸಿಪಿ ಸಿದ್ಧಾರ್ಥ್ ಗೋಯಲ್ ಸೂಚನೆ ನೀಡಿದರು.
ಎಸಿಪಿ ಜಗದೀಶ್ ಉಪಸ್ಥಿತರಿದ್ದರು. ಎಸಿಪಿ ಮನೋಜ್ ನಾಯಕ್ ಸಭೆ ನಿರ್ವಹಿಸಿದರು.