

ಕೆ.ಎಂ.ದೊಡ್ಡಿ: ಸ್ಮಶಾನಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವ ನಿಟ್ಟಿನಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೆ.ಎಂ.ದೊಡ್ಡಿ ಗ್ರಾ.ಪಂ.ಗೆ ಅಂತಿಮಯಾತ್ರೆ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ವಾಹನ ಹಸ್ತಾಂತರಿಸಿ ಶಾಸಕ ಕದಲೂರು ಉದಯ್ ಮಾತನಾಡಿ, ದಿನದಿಂದ ದಿನಕ್ಕೆ ಕೆ.ಎಂ.ದೊಡ್ಡಿ ದೊಡ್ಡ ಪಟ್ಟಣವಾಗಿ ಬೆಳೆಯುತ್ತಿದ್ದು ಬಹುದೊಡ್ಡ ವಾಣಿಜ್ಯ ಕೇಂದ್ರವಾಗಿ ಯಾವುದೇ ನಗರ ಪ್ರದೇಶಕ್ಕೂ ಕಡಿಮೆ ಇಲ್ಲ ಎಂಬಂತೆ ಶರವೇಗದಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಜನಸಂಖ್ಯೆಯೂ ಹೆಚ್ಚಳವಾಗುತ್ತಿದೆ ಎಂದು ಹೇಳಿದರು.
ಸಾವಿರಾರು ಕುಟುಂಬಗಳು ಉದ್ಯೋಗ ಸೇರಿದಂತೆ ವಿವಿಧ ಕೆಲಸ ಕಾರ್ಯಗಳನ್ನು ಮಾಡಿಕೊಂಡು ವಾಸ ಮಾಡುತ್ತಿದ್ದು ಸಂಬಂಧಿಕರು ಮೃತರಾದ ಸಂದರ್ಭದಲ್ಲಿ ಶವ ಸಾಗಿಸಲು ಕಷ್ಟ ಅನುಭವಿಸುತ್ತಿದ್ದರು. ಜತೆಗೆ ಶವ ಹೊತ್ತುಕೊಂಡು ದೂರದ ಸ್ಮಶಾನಕ್ಕೆ ಹೋಗಲು ಹರಸಾಹಸವನ್ನೇ ಪಡುವಂತಾಗಿತ್ತು. ಗ್ರಾ.ಪಂ. ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಅಹವಾಲಿಗೆ ಸ್ಪಂದಿಸಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶವಯಾತ್ರೆ ವಾಹನವನ್ನು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಎ.ಎಸ್. ರಾಜೀವ್, ಗ್ರಾ.ಪಂ. ಮಾಜಿ ಅಧ್ಯಕ್ಷ ರವಿಚಂದ್ರ, ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಪುಟ್ಟರಾಮು, ಕೆ.ವಿ.ಶ್ರೀನಿವಾಸ್, ಮುಖಂಡರಾದ ಬಿ.ಎಸ್.ಬೋರೇಗೌಡ, ಪೂಜಾರಿ ಮಹೇಶ್, ಅಣ್ಣೂರು ಮನೋಹರ್, ಡ್ರೈವರ್ ಗೋವಿಂದ ಇತರರು ಇದ್ದರು.