

ಶಿವಮೊಗ್ಗ: ಹಸುಗಳ ಬೆಳವಣಿಗೆ ಮತ್ತು ಆರೋಗ್ಯದ ದೃಷ್ಟಿಯಿಂದ ಉತ್ತಮ ಹಾಗೂ ನಿರಂತರವಾಗಿ ಹಸಿರು ಮೇವು ಒದಗಿಸುವ ಸಲುವಾಗಿ ಮಂಡೇನಕೊಪ್ಪದಲ್ಲಿ ಆರಂಭಗೊಳ್ಳುವ ನೂತನ ಸುರಭಿ ಗೋಶಾಲೆಯಲ್ಲಿ ‘ಗೋ ಪ್ರವೇಶೋತ್ಸವ’ ನ.30ರಂದು ಸಂಜೆ 5.53ಕ್ಕೆ ನಡೆಯಲಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ತಿಳಿಸಿದರು.
9 ಎಕರೆ ಜಮೀನನ್ನು ಗುತ್ತಿಗೆ ಪಡೆದು ಎರಡು ಸುಸಜ್ಜಿತ ಕೊಟ್ಟಿಗೆ ನಿರ್ಮಿಸಲಾಗಿದೆ. ಶುದ್ಧ ಗೋ ಮೂತ್ರ ಸಂಗ್ರಹ, ಸಾವಯವ ಗೊಬ್ಬರ ಸಂಗ್ರಹಣೆಗೆ ವ್ಯವಸ್ಥೆ ಮಾಡಿದ್ದು 300 ಹಸುಗಳಿಗೆ ಆಶ್ರಯ ನೀಡುವ ಆಶಯ ಹೊಂದಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸ್ತುತ ಗೋವುಗಳ ಲಾಲನೆ-ಪಾಲನೆ ಕಷ್ಟಕರವಾಗಿದೆ. ಬಿಡಾಡಿ ದನಗಳ ರಕ್ಷಣೆ ಮಾಡುವುದೂ ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲೂ ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಗೋ ಶಾಲೆ ಆರಂಭಿಸಿದ್ದು ಇಲ್ಲಿನ ಪರಿಸರ ಅಭಿವೃದ್ಧಿಗೆ ಎರಡು ಕೋಟಿ ರೂ. ಅಂದಾಜಿಸಲಾಗಿದೆ. ದಾನಿಗಳು ಸಹಕರಿಸಬೇಕೆಂದು ಮನವಿ ಮಾಡಿದರು.
ಗೋಧೂಳಿ ಲಗ್ನದಲ್ಲಿ ಪ್ರವೇಶ:
ಅಂದು ಸಂಜೆ 5.53ರಿಂದ 6ರವರೆಗೆ ಗೋಧೂಳಿ ಲಗ್ನದಲ್ಲಿ ಗೋ ಪ್ರವೇಶೋತ್ಸವ ನಡೆಯಲಿದ್ದು, ತೀರ್ಥಹಳ್ಳಿ ತಾಲೂಕಿನ ಬಾಳಗಾರು ಆರ್ಯ ಅಕ್ಷೋಭ್ಯ ಮಠದ ಮಧ್ವಚಾರ್ಯ ಮಹಾಸಂಸ್ಥಾನದ ರಘುಭೂಷಣತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯ ವಹಿಸುವರು ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಉಪಮೇಯರ್ ಸುರೇಖಾ ಮುರುಳೀಧರ್, ಜಿಪಂ ಸದಸ್ಯೆ ಹೇಮಾವತಿ ಶಿವನಂಜಪ್ಪ, ತಾಪಂ ಸದಸ್ಯ ಮುನಿರತ್ನ, ಮತ್ತೂರು-ಹೊಸಹಳ್ಳಿಯ ಗೋರಕ್ಷಣಾ ನ್ಯಾಸ ಸಮಿತಿಯ ಎಂ.ಬಿ.ಭಾನುಪ್ರಕಾಶ್, ಶ್ರೀ ಗಾಯತ್ರಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಚ್.ವಿ.ಸುಬ್ರಹ್ಮಣ್ಯ ಪಾಲ್ಗೊಳ್ಳುವರು ಎಂದರು.
ಉಪ ಮೇಯರ್ ಸುರೇಖಾ ಮುರುಳೀಧರ್, ಬಾಲಸುಬ್ರಹ್ಮಣ್ಯ, ಉಷಾ ಅರುಣ್, ಕೇಶವಮೂರ್ತಿ, ಶಂಕರ ನಾರಾಯಣ, ವೈ.ವಿ.ಜೋಯಿಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.