

ಕೊಳ್ಳೇಗಾಲ: ಪಟ್ಟಣದ ನಿಸರ್ಗ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ಮಾತನಾಡಿ, ಕೊಳ್ಳೇಗಾಲ ಮಲೆಮಾದೇಶ್ವರರು ಕಾಲೂರಿದ ಪವಿತ್ರ ಸ್ಥಳವಾಗಿದೆ. ಈ ಕ್ಷೇತ್ರ ದಲ್ಲಿ ಶಿಸ್ತು ಸಂಯಮಕ್ಕೆ ಹೆಸರು ಮಾನಸ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಬೋಧಕ ವರ್ಗ ವಿದ್ಯಾರ್ಥಿಗಳ ಕಲಿಕಾ ಸಾಧನೆಗಳಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದರು.
ಜಾತಿ ಧರ್ಮ ಮೂಢನಂಬಿಕೆಗಳಲ್ಲಿ ವಿದ್ಯಾರ್ಥಿಗಳು ಮುಳುಗಬಾರದು. ಬಸವಣ್ಣ ಅವರ ಜಾತ್ಯತೀತತೆ ಕುವೆಂಪು ಅವರ ವೈಚಾರಿಕತೆ ಸಮನ್ವಯತೆ ತಮಗೆ ದಾರಿ ದೀಪವಾಗಬೇಕು. ಅಳಿದ ಮೇಲು ಜೀವಂತವಾಗಿರುವ ಅಬ್ದುಲ್ ಕಲಾಂ ಅವರು ತಮಗೆ ಆದರ್ಶ ಮತ್ತು ಮಾದರಿ ಆಗಬೇಕು ಎಂದರು.
ಈ ವೇಳೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 584 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ವಿ.ಅಮೃತಾ, 583 ಅಂಕ ಪಡೆದು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನಗಳಿಸಿದ ಆರ್.ಪ್ರಿಯಾ ಮತ್ತು ಪಿ.ಯತಿನ್ ಗೌಡ, ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದ 581ಅಂಕ ಗಳಿಸಿದ ಜೀವನ್, ವಾಣಿಜ್ಯ ವಿಭಾಗದಲ್ಲಿ 589 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಎನ್.ಮಹೇಶ್, 584 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದ ತನುಶ್ರೀ, ಕಲಾ ವಿಭಾಗದಲ್ಲಿ 573 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಬಿ.ಅಶ್ವಿನಿ ಅವರನ್ನು ಸನ್ಮಾ ನಿಸಲಾಯಿತು.
ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಉಪನ್ಯಾಸಕರೇ ಕಾರಣ. ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ಈ ದಿನ ಸನ್ಮಾನಕ್ಕೆ ಭಾಜನರಾದ ವಿದ್ಯಾರ್ಥಿಗಳ ತಂದೆ ತಾಯಂದಿರ ಬದುಕು ಸಾರ್ಥಕ. ನಿಮ್ಮ ಉತ್ತಮ ಭವಿಷ್ಯವೇ ನನಗೆ ತೃಪ್ತಿ ನೀಡುತ್ತದೆ. ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಅದು ಎಲ್ಲರಿಗೂ ಸಾಧ್ಯವಾಗಬೇಕು. ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಸಾಧನೆಗೆ ನಾನು ಸದಾ ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜ್, ಸಂಯೋಜನಾ ಅಧಿಕಾರಿ ಎಂ.ಚನ್ನಶೆಟ್ಟಿ, ಡಾ.ಚಂಂದ್ರಶೇಖರ್ ಪ್ರಾಂಶುಪಾಲ ಡಿ.ಕೃಷ್ಣಗೌಡ, ಭೋದಕ ಹಾಗೂ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.