

ಬೆಂಗಳೂರು:
ಸಂಕಷ್ಟದ ಸ್ಥಿತಿಯಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತಂದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಗುಣಗಾನ ಮಾಡಿದ್ದಾರೆ.
ಜೆಪಿ ಭವನದಲ್ಲಿ ಜೆಡಿಎಸ್ ವತಿಯಿಂದ ಮನಮೋಹನ ಸಿಂಗ್ ಅವರಿಗೆ ಏರ್ಪಡಿಸಿದ್ದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿ, ಸರಳ ಸಜ್ಜನ ಪ್ರಾಮಾಣಿಕ ವ್ಯಕ್ತಿ ಆಗಿದ್ದವರು. ನಾವು ಪಕ್ಷ ರಾಜಕಾರಣವನ್ನು ಹೊರತುಪಡಿಸಿ ಅವರನ್ನು ನೆನೆಯುತ್ತಿದ್ದೇವೆ ಎಂದರು.
ಮನಮೋಹನ್ ಸಿಂಗ್ ಅವರನ್ನು ನಾನು ಬಹಳ ಟೀಕೆ ಮಾಡಿದ್ದೆ. ಅವರ ನೀತಿಗಳನ್ನು ಪ್ರಶ್ನೆ ಮಾಡಿದ್ದೆ. ಇದು ಅತ್ಯಂತ ದುಃಖದ ದಿನ. ನಾನು ಅವರನ್ನು ನೋಡಿದ್ದು 1991ರಲ್ಲಿ. ಆಗ ಅವರು ಆರ್ಥಿಕ ಸಚಿವರಾಗಿದ್ದರು. ನಾನು ಕೂಡ ಮೊದಲ ಬಾರಿಗೆ ಲೋಕಸಭೆಗೆ ಹೋಗಿದ್ದೆ. ನಮ್ಮ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಅನೇಕ ಪ್ರಯತ್ನಗಳನ್ನು ಮಾಡಿದರು ಎಂದು ಶ್ಲಾಸಿದರು.
ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳ ಮೂಲಕ ದೇಶಕ್ಕೆ ವಿದೇಶಿ ನೇರ ಬಂಡವಾಳ ದೊಡ್ಡ ಪ್ರಮಾಣದಲ್ಲಿ ಹರಿದು ಬಂತು. ಹಣಕಾಸು ಸಚಿವರಾಗಿ ಬರುವುದಕ್ಕೆ ಮೊದಲು ಅವರು ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಅಲ್ಲಿ ಬಹಳ ದೊಡ್ಡ ಅನುಭವ ಗಳಿಸಿಕೊಂಡಿದ್ದರು ಎಂದರು.
ದೇಶಕ್ಕೆ ಮನಮೋಹನ್ ಸಿಂಗ್ ಸುಧೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಮುತ್ಸದಿ ರಾಜಕಾರಣಿ ಹಿರಿಯ ರಾಜಕಾರಣಿ 92 ವಯಸ್ಸಲ್ಲಿ ಅಗಲಿದ್ದಾರೆ. ವಯಕ್ತಿಕ ನನಗೆ ತುಂಬಾ ಬೇಸರವಾಗಿದೆ. ಅವರ ಆತ್ಮಕ್ಕೆ ಭಗವಂತ ಮೋಕ್ಷ ಕೊಡಲಿ ಎಂದು ಭಾವುಕರಾದರು.
ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್‌ಗೌಡ, ಮಾಜಿ ಶಾಸಕ ಲಿಂಗೇಶ, ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.