ಮನಾಲಿಯಲ್ಲಿ ಮೇಘಸ್ಫೋಟ; ಹಠಾತ್ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ, ಸಂಚಾರ ಬಂದ್

Untitled-design-79
Published on

ಶಿಮ್ಲಾ: ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಉಂಟಾದ ಮೇಘಸ್ಫೋಟದಿಂದ ಅಂಜನಿ ಮಹಾದೇವ ನದಿ ಮತ್ತು ಅಖ್ರಿ ನಾಲೆಯಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ ಪಲ್ಚನ್, ರುವಾಡ್ ಮತ್ತು ಕುಲಾಂಗ್ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹದ ರಭಸಕ್ಕೆ ಎರಡು ಮನೆಗಳು ಕೊಚ್ಚಿ ಹೋಗಿದೆ.

ಪಲ್ಚನ್ ಸೇತುವೆ ಮತ್ತು ಪ್ರವಾಸಿ ತಾಣವಾದ ಸೋಲಾಂಗ್ ಬಳಿಯ ಸ್ನೋ ಗ್ಯಾಲರಿಯಲ್ಲಿ ಅವಶೇಷಗಳು ಶೇಖರಣೆಯಾಗಿದೆ. ಪ್ರವಾಹದಿಂದ ಬಂದ ದೊಡ್ಡ ಕಲ್ಲುಗಳು ಹೆದ್ದಾರಿಯಲ್ಲಿದ್ದು ಮನಾಲಿ-ಲೇಹ್ ಹೆದ್ದಾರಿಯನ್ನು ಮುಚ್ಚಲಾಗಿದೆ. ಮನಾಲಿ ಆಡಳಿತವು ಪರಿಹಾರ ಕಾರ್ಯದಲ್ಲಿ ತೊಡಗಿದೆ ಎಂದು ವರದಿಯಾಗಿದೆ.

ಪಲ್ಚನ್, ರುವಾಡ್ ಮತ್ತು ಕುಲಾಂಗ್ ಗ್ರಾಮಸ್ಥರು ಸಕಾಲದಲ್ಲಿ ತಮ್ಮ ಮನೆಗಳನ್ನು ಖಾಲಿ ಮಾಡಿದ್ದರಿಂದ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಘಟನೆಯಲ್ಲಿ ಪವರ್‌ಹೌಸ್‌ನ ಒಂದು ಭಾಗಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ಗುರುವಾರ(ಜುಲೈ 25) ತಿಳಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಗುಡುಗು ಸದ್ದಿನಿಂದ ಎಚ್ಚರವಾಯಿತು. ಮನೆಯನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದಂತೆ ಸುತ್ತಮುತ್ತಲಿನ ಪರಿಸ್ಥಿತಿ ನೋಡಿ ಭಯವಾಯಿತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮಧ್ಯರಾತ್ರಿ ಭಾರೀ ಮಳೆಯ ನಂತರ ಅಂಜನಿ ಮಹಾದೇವ ನದಿಯಲ್ಲಿ ಪ್ರವಾಹ ಉಂಟಾಯಿತು. ಮನಾಲಿಯಿಂದ ಸುಮಾರು 15 ಕಿ.ಮೀ ಮುಂದೆ ಈ ದಿಢೀರ್ ಪ್ರವಾಹ ಕಾಣಿಸಿಕೊಂಡಿದೆ. ಹಿಮನದಿಯಿಂದ ಹುಟ್ಟಿಕೊಂಡ ಅಂಜನಿ ಮಹಾದೇವ ಮಧ್ಯರಾತ್ರಿ ಭೀಕರ ಸ್ವರೂಪ ಪಡೆಕೊಂಡಿದೆ. ಪ್ರವಾಹದಿಂದ ಬಂದಂತಹ ದೊಡ್ಡ ಕಲ್ಲುಗಳು ಲೇಹ್ ಮನಾಲಿ ಹೆದ್ದಾರಿಗೆ ತಲುಪಿದ್ದು ಸೇತುವೆಯ ಮೇಲಿನ ಸಂಚಾರ ಸ್ಥಗಿತಗೊಂಡಿದೆ. ಹಠಾತ್ ಪ್ರವಾಹದಿಂದಾಗಿ ಇಲ್ಲಿ ಕೆಲವು ಮನೆಗಳು ಮತ್ತು ವಿದ್ಯುತ್ ಯೋಜನೆಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಮಾಚಲ ಪ್ರದೇಶದಲ್ಲಿ ಮಳೆಗಾಲದಲ್ಲಿ ಕಂಗ್ರಾ ಮತ್ತು ಮಂಡಿಯಲ್ಲಿ ಸಾಕಷ್ಟು ಮಳೆಯಾಗಿದೆ. ಬುಧವಾರ ರಾತ್ರಿ ಮಂಡಿ, ಶಿಮ್ಲಾ ಮತ್ತು ಮನಾಲಿಯಲ್ಲಿ ಭಾರೀ ಮಳೆಯಾಗಿದ್ದು ಮನಾಲಿಯಲ್ಲಿ ಹಾನಿಯಾಗಿದೆ. ಮುಂದಿನ ಐದು ದಿನಗಳವರೆಗೆ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net