ದೂರವಾಣಿ ಕರೆ ಸ್ವೀಕರಿಸದ ವ್ಯವಸ್ಥಾಪಕನಿಗೆ ತರಾಟೆ

mbl mla
ಮುಳಬಾಗಿಲು ಡಿಸಿಸಿ ಬ್ಯಾಂಕ್​ಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಭೇಟಿ ನೀಡಿ ವ್ಯವಸ್ಥಾಪಕ ಚೆಲುವರಾಜ್​ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜೆಡಿಎಸ್​ ಮುಖಂಡರಾದ ಎಂ.ಆರ್​.ಮುರಳಿ, ಬಿ.ವಿ.ಚಾಮೇಗೌಡ, ವಿ.ರಘುಪತಿ ರೆಡ್ಡಿ ಮತ್ತಿತರರು ಇದ್ದರು.
Published on

ಮುಳಬಾಗಿಲು: ನಗರದ ಡಿಸಿಸಿ ಬ್ಯಾಂಕ್​ ಕೆಲ ಎಂಎಲ್​ಎ, ಎಂಎಲ್​ಸಿಗಳ ಮಾರಾಟ ಕೇಂದ್ರವಾಗಿದೆ. ಸಹಕಾರಿ ಬ್ಯಾಂಕ್​ ಎಂಬುದನ್ನೇ ಇಲ್ಲಿನ ಸಿಬ್ಬಂದಿ ಮರೆತು ಕೆಲವರ ಕೈ ಗೊಂಬೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಶಾಸಕ ಸಮೃದ್ಧಿ ವಿ.ಮಂಜುನಾಥ ಬುಧವಾರ ಬ್ಯಾಂಕಿಗೆ ಭೇಟಿ ನೀಡಿ, ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಹೆಬ್ಬಣಿ ವ್ಯವಸಾಯ ಸೇವಾ ಸಹಕಾರ ಸಂಘದ ಡೆಲಿಗೇಟ್​ ಸಭೆ ಸಂಬಂಧಿಸಿದಂತೆ ಚರ್ಚಿಸಲು ನೂರಾರು ಬಾರಿ ಕರೆ ಮಾಡಿದರೂ ಡಿಸಿಸಿ ಬ್ಯಾಂಕ್​ ವ್ಯವಸ್ಥಾಪಕರು ಸ್ವೀಕರಿಸದ ಹಿನ್ನೆಲೆಯಲ್ಲಿ ಬುಧವಾರ ಬ್ಯಾಂಕ್​ಗೆ ಭೇಟಿ ನೀಡಿ ವ್ಯವಸ್ಥಾಪಕ ಚಲುವರಾಜ್​ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಹೆಬ್ಬಣಿ ಸೊಸೈಟಿಯ ಡೆಲಿಗೇಟ್​ ಆಯ್ಕೆ ಪ್ರಕ್ರಿಯೆಯಲ್ಲಿ ಡಿಸಿಸಿ ಬ್ಯಾಂಕ್​ನಿಂದ ಅಧಿಕಾರಿಯನ್ನು ನೇಮಿಸಲಾಗಿದೆ. ಆದರೆ, ಅಧಿಕಾರಿ ಮಾತ್ರ ಇದುವರೆಗೆ ಯಾವುದೇ ಸಭೆಗೆ ಹಾಜರಾಗಿಲ್ಲ. ಡೆಲಿಗೇಟ್​ ಆಯ್ಕೆ ಪ್ರಕ್ರಿಯೆ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ, ಯಾರ ಕೈಗೂ ಸಿಗುತ್ತಿಲ್ಲ. ಮೂರು ಬಾರಿ ಕರೆಯಲಾಗಿದ್ದ ಸಭೆಗಳನ್ನೂ ಮುಂದೂಡಲಾಗಿದೆ. ಈ ಬಗ್ಗೆ ಕೇಳಲು ಬರೊಬ್ಬರಿ ನೂರು ಬಾರಿ ಕರೆ ಮಾಡಿದರೂ ವ್ಯವಸ್ಥಾಪಕರು ಸ್ವೀಕರಿಸಿಲ್ಲ. ಸ್ಥಳಿಯ ಶಾಸಕರ ಕರೆ ಸ್ವೀಕರಿಸದಷ್ಟು ಒತ್ತಡ ಇದೆಯೇ ಎಂದು ಸಮೃದ್ಧಿ ಮಂಜುನಾಥ್​ ಪ್ರಶ್ನಿಸಿದರು. ಇದು ಸಾರ್ವಜನಿಕ ಆಸ್ತಿಯೋ ಇಲ್ಲ ನಿಮ್ಮ ವೈಯಕ್ತಿಕ ವ್ಯವಹಾರಗಳ ಕೊಠಡಿಯೋ, ಇವೆಲ್ಲಕ್ಕೂ ಮುಂದಿನ ದಿನಗಳಲ್ಲಿ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾನೂನು ಕ್ರಮದ ಎಚ್ಚರಿಕೆ

ಸಹಕಾರ ಕ್ಷೇತ್ರ ಇರುವುದು ಜನರಿಗಾಗಿ. ಆದರೀಗ ಡಿಸಿಸಿ ಬ್ಯಾಂಕ್​ಅನ್ನು ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಇದು ಮುಳಬಾಗಿಲಿನಲ್ಲಿ ನಡೆಯುವುದಿಲ್ಲ. ಪ್ರತಿಯೊಬ್ಬರೂ ಸಂವಿಧಾನದಡಿ ಕೆಲಸ ಮಾಡಬೇಕು. ಸರ್ವಾಧಿಕಾರಿ ಧೋರಣೆಯಿಂದ ಆಡಳಿತಕ್ಕೆ ಒಳಪಟ್ಟು ಕೊಟ್ಟರೆ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಹೆಬ್ಬಣಿ ಸೊಸೈಟಿಯಲ್ಲಿ ಸಭೆ ನಡೆಸದಿದ್ದರೆ ಮುಂದಿನ ಹೋರಾಟ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಬ್ಯಾಂಕ್​ನ ಕಾರ್ಯಗಳನ್ನು ಕಾನೂನಿನಡಿ ಮಾಡಿಕೊಡಬೇಕು. ಡೆಲಿಗೇಟ್​ ಪ್ರಕ್ರಿಯೆಗೆ ಶ್ರೀ ಸಭೆ ನಡೆಸಬೇಕು ಎಂದು ಬ್ಯಾಂಕ್​ ವ್ಯವಸ್ಥಾಪಕ ಚಲುವರಾಜ್​ಗೆ ಸಮೃದ್ಧಿ ಮಂಜುನಾಥ ತಿಳಿಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net