ಮ್ಯಾನೇಜ್ಮೆಂಟ್‌ವೈದ್ಯ ಸೀಟು: ಸರ್ಕಾರಕ್ಕೆ ಹೈಕೋರ್ಟ್ ತಡೆ

highcourt
Published on

ಬೆಂಗಳೂರು: ರಾಜ್ಯದ 17 ಖಾಸಗಿ ವೈದ್ಯಕೀಯ ಕಾಲೇಜುಗಳ ಮ್ಯಾನೇಜ್ಮೆಂಟ್ ಮತ್ತು ಎನ್‌ಆರ್‌ಐ ಕೋಟಾದ 212 ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

ಬೆಂಗಳೂರಿನ ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸೇರಿ ವಿವಿಧ ಕಾಲೇಜುಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಆರ್‌ಜಿಯುಎಚ್‌ಎಸ್ ಕ್ರಮ ಪ್ರಶ್ನಿಸಿ ಕಾಲೇಜುಗಳು ಮತ್ತು ವಿದ್ಯಾರ್ಥಿಗಳು ಏಕಸದಸ್ಯಪೀಠದ ಮುಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಆರ್‌ಜಿಯುಎಚ್‌ಎಸ್ ಮತ್ತು ಎನ್‌ಎಂಸಿ ಪರವಾಗಿ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸದೆ ಕೇವಲ ಮೌಖಿಕವಾಗಿ ವಾದ ಮಂಡಿಸಲಾಗಿದೆ. ಅದನ್ನು ಪರಿಗಣಿಸಿ ಏಕಸದಸ್ಯಪೀಠ ಅದೇಶ ಹೊರಡಿಸಿದ್ದು, ಅದಕ್ಕೆ ಮಾನ್ಯತೆಯಿಲ್ಲ ಎಂದರು.

ಸರ್ಕಾರದ ಪರ ವಾದ ಮಂಡಿಸಿದ ವಕೀಲರು, 2024-25ನೇ ಸಾಲಿನ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೇಲ್ಮನವಿ ಬಗ್ಗೆ ತೀರ್ಪಿಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಕಾಯುತ್ತಿದೆ ಎಂಬುವುದಾಗಿ ತಿಳಿಸಿದರು.

ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ ಏಕಸದಸ್ಯ ಪೀಠ ಹೊರಡಿಸಿದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಜತೆಗೆ ಏಕಸದಸ್ಯಪೀಠದ ಆದೇಶದಂತೆ ಖಾಸಗಿ ಕಾಲೇಜುಗಳು ನಾಲ್ಕು ವಾರದೊಳಗೆ ತಾವು ಎಷ್ಟು ಸೀಟುಗಳನ್ನು ಸರಂಡರ್ ಮಾಡುತ್ತವೋ ಅಷ್ಟು ಸೀಟುಗಳಿಗೆ ಖಾಸಗಿ ಕಾಲೇಜುಗಳಿಗೆ ಸರ್ಕಾರಿ ಕೋಟಾಕ್ಕೆ ನಿಗದಿಪಡಿಸಿರುವ ಶುಲ್ಕಕ್ಕೂ ಮತ್ತು ಮ್ಯಾನೇಜ್ಮೆಂಟ್ ಹಾಗೂ ಎನ್‌ಆರ್‌ಐ ಕೋಟಾದ ಶುಲ್ಕದ ನಡುವಿನ ವ್ಯತ್ಯಾಸದ ಮೊತ್ತವನ್ನು ಪಾವತಿಸಬೇಕು ಎಂದು ವಿಭಾಗೀಯ ಪೀಠ ಅದೇಶಿಸಿದೆ.

ಅಲ್ಲದೆ, ಒಂದು ವೇಳೆ ಖಾಸಗಿ ವೈದ್ಯಕೀಯ ಕಾಲೇಜುಗಳ ಮೇಲ್ಮನವಿಗಳು ವಜಾಗೊಂಡರೆ ಈ ವರ್ಷದ ಬದಲು ಮುಂದಿನ ಶೈಕ್ಷಣಿಕ ವರ್ಷ ಸೀಟುಗಳನ್ನು ಸರಕಾರಿ ಕೋಟಾಕ್ಕೆ ಬಿಟ್ಟುಕೊಡಬೇಕಾಗುತ್ತದೆ ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net