"ಪದವಿ ಪೂರ್ವ' ಮತ್ತು "ಮನದ ಕಡಲು' ಚಿತ್ರಗಳ ಬಳಿಕ ನಟಿ ಅಂಜಲಿ ಅನೀಷ್ ಪರಭಾಷೆಗಳಿಗೆ ಹಾರಿದ್ದಾರೆ. ಹಾಗಂತ ಕನ್ನಡದಲ್ಲಿ ನಟಿಸುತ್ತಿಲ್ಲ ಅಂತಲ್ಲ. ಬದಲಾಗಿ ಕನ್ನಡದ ಜತೆಗೆ ತಮಿಳು, ಮಲಯಾಳಂನಲ್ಲೂ ಬಿಜಿಯಾಗಿದ್ದಾರೆ. ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ, ರಿಷಿ ಮತ್ತು ಪ್ರಕಾಶ್ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ "ಅನಂತ ಪದ್ಮನಾಭ' ಚಿತ್ರಕ್ಕೆ ಅಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೆ ನಟಿ ಚಿತ್ರತಂಡ ಸೇರಿದ ಕುರಿತು ವಿಡಿಯೋ ಝಲಕ್ ಮೂಲಕ ಘೋಷಿಸಲಾಗಿದೆ. "ಕಥೆ ಇಷ್ಟವಾಯಿತು. ತುಂಬ ವಿಭಿನ್ನವಾದ ಸ್ಟೋರಿ. ಒಂದೇ ರೀತಿಯ ಕಥೆಗಳು ಹೆಚ್ಚು ಬರುತ್ತಿರುತ್ತವೆ. ಆದರೆ, ಈ ಕಥೆ ಡಿರೆಂಟ್ ಆಗಿತ್ತು. ನನ್ನ ಪಾತ್ರವೂ ಇಷ್ಟವಾಯಿತು. ಕ್ರಿಯೇಟಿವಿಟಿ, ಕಂಟೆಂಟ್ ವಿಷಯದಲ್ಲಿ ತುಂಬ ರಿಚ್ ಸಿನಿಮಾ. ಒಂದೊಳ್ಳೆ ತಂಡ, ವಿಭಿನ್ನ ಕಥೆ, ಸವಾಲಿನ ಪಾತ್ರವಾದ ಕಾರಣ ಒಪ್ಪಿಕೊಂಡೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಒಂದು ಹಾಡು ಹಾಗೂ ಮೂರು ದಿನಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಅವಕಾಶಗಳೇನೋ ಬರುತ್ತಿವೆ. ಸವಾಲಿನ, ವಿಭಿನ್ನವಾಗಿರುವ ಕಥೆ, ಪಾತ್ರಗಳನ್ನಷ್ಟೇ ನಾನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ನಟಿಯಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.