ಕ್ರೇನ್ ಸಹಾಯದಿಂದ 8 ಟನ್‌ನ ರೋಡ್ ರೋಲರ್ ಕದ್ದ ಆರೋಪಿ ಸೆರೆ!

ರೊಅದ
Published on

ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ನಾಗರಬಾವಿಯ ನಾರಾಯಣಪ್ಪ ಮೈದಾನದಲ್ಲಿ ನಿಲ್ಲಿಸಿದ್ದ 8 ಟನ್ ತೂಕದ ರೋಡ್ ರೋಲರ್‌ನ್ನು ಕ್ರೇನ್ ಮೂಲಕ ಲಾರಿಯಲ್ಲಿ ತುಂಬಿ ಕದ್ದೊಯ್ದು ಮಾರಾಟ ಮಾಡಲು ಯತ್ನಿಸಿದ್ದ ಆರೋಪಿ ಚಂದ್ರಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನಾಗರಬಾವಿಯ ನಿವಾಸಿ ಪವನ್ (28) ಬಂಧಿತ. ತಲೆಮರೆಸಿಕೊಂಡಿರುವ ಆರೋಪಿಗಳಾದ ವಿನಯ್, ಇಸ್ಮಾಯಿಲ್‌ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. 2 ಲಕ್ಷ ರೂ. ಮೌಲ್ಯದ ರೋಡ್ ರೋಲರ್ ಬಿಡಿ ಭಾಗಗಳನ್ನು ಚಂದ್ರ ಲೇಔಟ್ ಪೊಲೀಸರು ಜಪ್ತಿ ಮಾಡಿದ್ದಾರೆ.

ತಮಿಳುನಾಡು ಮೂಲದ ಚಂದ್ರಲೇಔಟ್ ನಿವಾಸಿ ಸೆಲ್ವರಾಜ್ (38) ಕಳೆದ 12 ವರ್ಷಗಳ ಹಿಂದೆ 5.50 ಲಕ್ಷ ರೂ. ನೀಡಿ ರೋಡ್ ರೋಲರ್ ಖರೀದಿಸಿ ತಮಿಳುನಾಡಿನಿಂದ ಬೆಂಗಳೂರಿಗೆ ತಂದಿದ್ದರು. ಬೆಂಗಳೂರಲ್ಲಿ ಬಿಬಿಎಂಪಿಯ ರಸ್ತೆ ಕಾಮಗಾರಿಯನ್ನು ಗುತ್ತಿಗೆ ಆಧಾರದಲ್ಲಿ ನಡೆಸುತ್ತಿದ್ದರು. ನಂತರ ಪ್ರತಿನಿತ್ಯ ನಾರಾಯಣಪ್ಪ ಮೈದಾನದಲ್ಲಿ ನಿಲುಗಡೆ ಮಾಡಿ ಹೋಗುತ್ತಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಮೇ 25ರಂದು ರೋಡ್ ರೋಲರ್‌ನ್ನು ನಾಗರಭಾವಿಯ ನಾರಾಯಣಪ್ಪ ಮೈದಾನದಲ್ಲಿ ನಿಲುಗಡೆ ಮಾಡಿ ತಮಿಳುನಾಡಿಗೆ ಹೋಗಿದ್ದರು. ಜೂ.19ರಂದು ನಗರಕ್ಕೆ ವಾಪಾಸ್ ಬಂದು ನೋಡಿದಾಗ ರೋಲರ್ ಇರಲಿಲ್ಲ. ಈ ಬಗ್ಗೆ ಸೆಲ್ವರಾಜ್ ಚಂದ್ರಾಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ ?

ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಇನ್‌ಸ್ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ನೇತೃತ್ವದ ತಂಡ ಮೈದಾನದ ಆಸು-ಪಾಸಿನಲ್ಲಿದ್ದ ಸುತ್ತ ಮುತ್ತಲಿನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿ ಪವನ್‌ನ ಸುಳಿವು ಸಿಕ್ಕಿತ್ತು. ಕೂಡಲೇ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳ ಪೈಕಿ ವಿನಯ್ ನಾರಾಯಣಪ್ಪ ಮೈದಾನದ ಮಾಲೀಕರ ಮಗನಾಗಿದ್ದು, ತನ್ನ ಕಾರು ಚಾಲಕ ಪವನ್ ಮೂಲಕ ಮೇ 12ರಂದು ಕ್ರೇನ್ ತರಿಸಿ 8 ಟನ್ ತೂಕದ ರೋಲರ್‌ನ್ನು ಲಾರಿಗೆ ತುಂಬಿ ಬೇರೆಡೆ ಸಾಗಿಸಿದ್ದ. ನಂತರ ರೋಲರ್‌ನ ಎಲ್ಲ ಬಿಡಿ ಬಾಗಗಳನ್ನು ಬಿಚ್ಚಿ ಇಸ್ಮಾಯಿಲ್ ಎಂಬ ಗುಜರಿ ವ್ಯಾಪಾರಿಗೆ ಕೆ.ಜಿಗೆ 20 ರೂ.ನಂತೆ 2.10 ಲಕ್ಷ ರೂ.ಗೆ ಮಾರಾಟ ಮಾಟಲು ಡೀಲ್ ಕುದುರಿಸಿದ್ದ. ಅಷ್ಟರಲ್ಲಿ ಪೊಲೀಸರು ಬಂದು ರೋಲರ್ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲ ಸಮಯಗಳಿಂದ ಮೈದಾನದಲ್ಲಿ ರೋಲರ್ ನಿಲುಗಡೆ ಮಾಡಿರುವುದನ್ನು ಗಮನಿಸಿದ ಆರೋಪಿಗಳು ಮೊದಲೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net