

ಮುಲುಗು (ತೆಲಂಗಾಣ): ಮಕ್ಕಳ ಉದ್ಯಾನದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯನ್ನು ಜೆಸಿಬಿ ಚಾಲಕ ವಾಹನದ ಲೋಡರ್ ಬಳಸಿ ಕೆಳಕ್ಕೆ ಉರುಳಿಸುವ ಪ್ರಯತ್ನ ಮಾಡಿರುವ ಭಯಾನಕ ಘಟನೆ ಇಲ್ಲಿ ನಡೆದಿದೆ.
ಮಂಗಪೇಟೆ ಮಂಡಲದ ಕಮಲಾಪುರ ಗ್ರಾಮದಲ್ಲಿ ಮಕ್ಕಳ ಉದ್ಯಾನವನದ ಅಭಿವೃದ್ಧಿ ಕಾರ್ಯ ನಡೆದಿತ್ತು. ಇದನ್ನು ವಿರೋಧಿಸಿ ಎಸ್ ಮೋಹನ್ ಎನ್ನುವವರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವಿಡಿಯೋ ಮಾಡುತ್ತಿದ್ದ ಸ್ಥಳೀಯರು ಈ ದೃಶ್ಯವನ್ನು ಕೂಡ ಚಿತ್ರೀಕರಿಸಿದ್ದಾರೆ.
ಮೋಹನ್ ಅವರು ವಾಹನದ ಮುಂದೆ ಬಂದು ಕೆಲಸಗಳಿಗೆ ಅಡ್ಡಿಯುಂಟುಮಾಡಲು ಪ್ರಯತ್ನಿಸಿದಾಗ, ಜೆಸಿಬಿಯ ಚಾಲಕ ಅವರನ್ನು ವಾಹನದ ಮೂಲಕವೇ ಕೆಳಕ್ಕೆ ಉರುಳಿಸಿದರು. ಇದರ ಪರಿಣಾಮವಾಗಿ ಮೋಹನ್ ಕೆಳಗೆ ಬಿದ್ದಿದ್ದಾರೆ. ಅವರ ತಲೆಗೆ ಬಲವಾದ ಏಟು ಬಿದ್ದಿದೆ.
ಮೂಲಗಳ ಪ್ರಕಾರ, ಚಾಲಕ ಸೈಟ್ ಬಳಿ ಇರುವ ಮರದ ಸುತ್ತಲಿನ ವೇದಿಕೆಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದ. ಮೋಹನ್ ಅದನ್ನು ತಡೆದಿದ್ದರು. ಮರ ಮತ್ತು ಅದರ ಸುತ್ತಮುತ್ತಲಿನ ವೇದಿಕೆ ಸ್ಥಳೀಯರು ಕುಳಿತುಕೊಳ್ಳಲು ಪ್ರಶಸ್ತಿವಾಗಿದೆ. ಆದ್ದರಿಂದ ಅದನ್ನು ನೆಲಸಮ ಮಾಡಬೇಡಿ ಎಂದು ಹೇಳಿದರು ಹಾಗೂ ಅದನ್ನು ತಡೆಯಲು ಪ್ರಯತ್ನಿಸಿದರು.
ಈ ಸಮಯದಲ್ಲಿ ಇಬ್ಬರ ನಡುವೆ ತೀವ್ರವಾದ ವಾದ-ಪ್ರತಿವಾದವಾಗಿದೆ. ಮಾತಿಗೆ ಮಾತು ಬೆಳೆದಾಗ ಕೋಪಗೊಂಡ ಚಾಲಕ ಲೋಡರ್ ಬಳಸಿ ಮೋಹನ್ ಅವರನ್ನು ಕೆಡವಿದ್ದಾನೆ. ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಮೋಹರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. (ಏಜೆನ್ಸೀಸ್)