ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಮೂವರು ಅಪ್ರಾಪ್ತ ಮಕ್ಕಳೊಡನೆ ತಾನೂ ನದಿ ಪಾಲಾದ ತಂದೆ

suicide
Published on

ಛತ್ತೀಸ್‌ಗಢ: ರಾಯ್‌ಗಢ ಜಿಲ್ಲೆಯಲ್ಲಿ ಭಾನುವಾರ 38 ವರ್ಷದ ವ್ಯಕ್ತಿಯೊಬ್ಬ ತನ್ನ ಮೂವರು ಅಪ್ರಾಪ್ತ ಮಕ್ಕಳನ್ನು ನದಿಗೆ ಎಸೆದು ತಾನೂ ನದಿಗೆ ಹಾರಿದ ಘಟನೆ ನಡೆದಿದೆ.

ನದಿಯಲ್ಲಿ ಅವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದ್ದು,ಈ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಅಪಾಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಈ ಘಟನೆ ಖಾರ್ಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಾಂಡ್ ನದಿಯ ಸೇತುವೆಯಲ್ಲಿ ನಡೆದಿದೆ ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದ್ದಾರೆ.

ಎಡು ಗ್ರಾಮ ಮೂಲದ ಕಾರ್ತಿಕೇಶ್ವರ ರತಿಯಾ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ತನ್ನ ಮಕ್ಕಳಾದ ಖಿರ್ಸಾಗರ್ (5), ನರ್ಮದಾ (3) ಮತ್ತು ಎಂಟು ತಿಂಗಳ ತೇಜ್ ಪ್ರಕಾಶ್ ಅವರೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಬಾರ್ರಾ ಗ್ರಾಮದತ್ತ ತೆರಳುತ್ತಿದ್ದ. ಆತ ಇದ್ದಕ್ಕಿದ್ದಂತೆ ವಾಹನವನ್ನು ಸೇತುವೆಯ ಮೇಲೆ ನಿಲ್ಲಿಸಿ ತಮ್ಮ ಮಕ್ಕಳನ್ನು ನದಿಗೆ ಎಸೆದು ನಂತರ ಆತನೂ ನದಿಗೆ ಹಾರಿದ ಎಂದು ಅವರು ಹೇಳಿದರು.

"ಮಾಹಿತಿ ಪಡೆದ ನಂತರ ಪೊಲೀಸರು ಕೆಲವು ಡೈವರ್‌ಗಳೊಂದಿಗೆ ಸ್ಥಳಕ್ಕೆ ಧಾವಿಸಿ ನದಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಈವರೆಗೆ ಯಾರೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸೌತ್ ಈಸ್ಟರ್ನ್ ಕೋಲ್​​ಫೀಲ್ಡ್ಸ್ ಲಿಮಿಟೆಡ್ (ಎಸ್‌ಇಸಿಎಲ್) ನ ವಿದ್ಯುತ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ರತಿಯಾ ಕೈಗೊಂಡ ಈ ದುರಂತ ನಡೆಯ ಹಿಂದೆ ಕುಟುಂಬ ವಿವಾದ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net