

ಬ್ರೆಜಿಲ್ ಅಧ್ಯಕ್ಷ ಜೇರ್ ಜೈರ್ ಬೋಲ್ಸನಾರೊ ಅವರು ಈಗೆರಡು ದಿನಗಳ ಹಿಂದೆ ಕೊವಿಡ್-19 ಲಾಕ್ಡೌನ್ ಪರಿಣಾಮ, ಮುಂದಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲು ಪ್ರಮುಖ ಅಧಿಕಾರಿಗಳು, ಸಚಿವರುಗಳು, ಉದ್ಯಮಿಗಳೊಂದಿಗೆ ವಿಡಿಯೋ ಕಾಲ್ ಮೂಲಕ ಸಭೆ ಹಮ್ಮಿಕೊಂಡಿದ್ದರು. ಆದರೆ ಈ ಸಭೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ...!
ವಿಡಿಯೋ ಕಾಲ್ನಲ್ಲಿ ಸಭೆ ನಡೆಯುತ್ತಿತ್ತು, ಈ ಮಧ್ಯೆ ಉದ್ಯಮಿಯೋರ್ವ ಬೆತ್ತಲೆಯಾಗಿ ಕಾಣಿಸಿಕೊಂಡು, ಉಳಿದವರಿಗೂ ತೀವ್ರ ಮುಜುಗರ ಉಂಟು ಮಾಡಿದರು.
ಸಾವೋ ಪಾಲೋದ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಪೌಲೋ ಸ್ಕಾಫ್ ಹೀಗೆ ಎಡವಟ್ಟು ಮಾಡಿದವರು. ಈ ಉದ್ಯಮಿ ಕ್ಯಾಮರಾ ಆಫ್ ಮಾಡಲು ಮರೆತು ಸ್ನಾನಕ್ಕೆ ಇಳಿದಿದ್ದೇ ಅವಾಂತರಕ್ಕೆ ಕಾರಣವಾಯ್ತು. ಪೌಲೋ ಸ್ಕಾಫ್ ಬೆತ್ತಲೆ ದೇಹ ವಿಡಿಯೋ ಕಾಲ್ನಲ್ಲಿ ಕಾಣಿಸುತ್ತಿದ್ದಂತೆ ತೀವ್ರ ಸಿಟ್ಟಾದ ಅಧ್ಯಕ್ಷ ಬೋಲ್ಸನಾರೊ, ಸ್ಥಳದಲ್ಲಿದ್ದ ಕೈಗಾರಿಕಾ ಸಚಿವ ಪೌಲೋ ಗುಡೆಸ್ ಬಳಿ ಈ ಬಗ್ಗೆ ಪ್ರಶ್ನಿಸಿದರು. ಈ ಉದ್ಯಮಿಯೊಂದಿಗೆ ಆಗಲೇ ಚರ್ಚೆ ನಡೆದಿತ್ತಲ್ಲ. ನಮ್ಮೊಂದಿಗೆ ವಿಡಿಯೋ ಕಾಲ್ನಲ್ಲಿ ಇದ್ದರಲ್ಲ. ಈಗ ನೋಡಿದರೆ ಹೀಗೆ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಸರಿ ಇದ್ದಾರಾ? ಏನಾದರೂ ಸಮಸ್ಯೆಯಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಬಹುಶಃ ಅಧ್ಯಕ್ಷರೊಂದಿಗೆ ನಡೆದ ಚರ್ಚೆ ತುಂಬ ಹಾಟ್ ಆಗಿತ್ತು ಅನ್ನಿಸುತ್ತದೆ. ಹಾಗಾಗಿ ಮನೆಯಲ್ಲಿ ಒಬ್ಬನೇ ಬೆತ್ತಲೆಯಾಗಿ ತಣ್ಣನೆ ನೀರಲ್ಲಿ ಸ್ನಾನ ಮಾಡುತ್ತಿದ್ದಾನೆ..ಗ್ರೇಟ್ ಎಂದು ಕೈಗಾರಿಕಾ ಸಚಿವ ಗುಡೆಸ್ ಉತ್ತರಿಸಿದ್ದಾರೆ. ಆದರೂ ಈ ಸನ್ನಿವೇಶ ತುಂಬ ಮುಜುಗರ ಸೃಷ್ಟಿಸಿತು.
ಆದರೆ ವಿಡಿಯೋ ಕಾಲ್ ಸ್ಕ್ರೀನ್ನಲ್ಲಿ ಕಾಣಿಸಿಕೊಂಡ ಈ ದೃಶ್ಯದ ಸ್ಕ್ರೀನ್ಶಾಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.
ಲಾಕ್ಡೌನ್ನಿಂದಾಗಿ ಹಲವು ದೇಶಗಳಲ್ಲಿ ಎಲ್ಲರೂ ಬಹುತೇಕ ವರ್ಕ್ ಫ್ರಾಂ ಹೋಂನಲ್ಲಿದ್ದಾರೆ. ಅಂದಿನಿಂದಲೂ ಇಂತಹ ವಿಚಿತ್ರ ಸನ್ನಿವೇಶಗಳು ನಡೆಯುತ್ತಲೇ ಇವೆ. (ಏಜೆನ್ಸೀಸ್)