

ನ್ಯೂಯಾರ್ಕ್: ರಾತ್ರಿ ಮನೆಯ ಅಡುಗೆ ಕೋಣೆಯಿಂದ ಕೇಳಿಬಂದ ವಿಚಿತ್ರ ಶಬ್ದದಿಂದ ಎಚ್ಚರಗೊಂಡ ವ್ಯಕ್ತಿಯೊಬ್ಬ ತನ್ನ ಖಾಲಿ ಅಡುಗೆ ಕೋಣೆಯ ಫೋಟೋ ಕ್ಲಿಕ್ಕಿಸಿ ನೋಡಿದಾಗ ಅದರಲ್ಲಿದ್ದ ಭಯಹುಟ್ಟಿಸುವ ಆಕಾರ ನೋಡಿ ಮನೆಯನ್ನೇ ಖಾಲಿ ಮಾಡುವ ನಿರ್ಧಾರಕ್ಕೆ ಬಂದಿದ್ದನಂತೆ.
ತನಗಾದ ಭಯಾನಕ ಅನುಭವನ್ನು ಅಮೆರಿಕ ವ್ಯಕ್ತಿ ರೆಡಿಟ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಾನು ಸೆರೆಹಿಡಿದ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾನೆ. "ಅಡುಗೆ ಕೋಣೆಯಲ್ಲಿ ವಿಚಿತ್ರ ಶಬ್ದ ಕೇಳಿ ಎಚ್ಚರಗೊಂಡು ಫೋಟೋ ತೆಗೆದು ನೋಡಿದಾಗ" ಎಂದು ಫೋಟೋಗೆ ಅಡಿಬರಹವನ್ನು ನೀಡಿದ್ದಾನೆ.
ಮಂದ ಬೆಳಕಿನಲ್ಲಿ ತೆಗೆದಿರುವ ಫೋಟೋವನ್ನು ಆರಂಭದಲ್ಲಿ ನೋಡಿದಾಗ ಅದರಲ್ಲಿ ಏನೂ ಇಲ್ಲ ಎಂಬಂತೆ ಕಾಣುತ್ತದೆ. ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ ಕೌಂಟರ್ಟಾಪ್ನಲ್ಲಿ ಕೆಲವು ಪ್ರತ್ಯೇಕಿಸಲಾಗದ ವಸ್ತುಗಳು ಇಟ್ಟಿರುವಂತೆ ಕಾಣುತ್ತದೆ. ಜೂಮ್ ಮಾಡಿದಾಗ ಬಾಗಿಲ ಹಿಂಬದಿ ಯಾರೋ ತಲೆ ಇಟ್ಟು ಬಗ್ಗಿ ನೋಡುತ್ತಿರುವಂತೆ ಭಾಸವಾಗುತ್ತದೆ. ನೆಟ್ಟಿಗರು ಸಹ ಜೂಮ್ ಮಾಡಿ ನೋಡುವವರೆಗೂ ಫೋಟೋದಲ್ಲಿ ಏನೂ ಇಲ್ಲ ಅಂದುಕೊಂಡಿದ್ದೆವು ಎಂದು ತಿಳಿಸಿದ್ದಾರೆ.
ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಈಗಲೂ ಸಹ ಏನಿದೆ ಎಂದು ಗುರುತಿಸಲು ಆಗಿಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬಾಗಿಲ ಮೇಲೆ ಪಾರದರ್ಶಕ ಮುಖ ಕಾಣುತ್ತದೆ ಎಂದಿದ್ದಾರೆ. ಇದೇನಾದರೂ ಸುಳ್ಳಾಗಿರದಿದ್ದರೆ ನಿಜಕ್ಕೂ ಅಲ್ಲಿ ದೆವ್ವವಿದೆ. ಆದರೆ, ಅದು ದೆವ್ವ ಆಗಿರಬಾರದು ಎಂದು ನಾನು ಭಯಸುತ್ತೇನೆ ಎಂದು ನೆಟ್ಟಿಗನೊಬ್ಬ ಕಮೆಂಟಿಸಿದ್ದಾನೆ. ಕೆಲವರು ಮಾಸ್ಕ್ ಇರಬಹುದು ಎಂದು ವಾದ ಮಾಡಿದ್ದಾರೆ. ಕೆಲವರು ಇದು ಎಡಿಟ್ ಮಾಡಿರುವ ಚಿತ್ರ ಇಬಹುದು ಎಂದಿದ್ದು, ಫೋಟೋದಲ್ಲಿ ಸ್ಪಷ್ಟತೆ ಇಲ್ಲ ಎಂದಿದ್ದಾರೆ.
ಫೋಟೋ ಭಾರಿ ವೈರಲ್ ಆಗಿದ್ದು, 1000ಕ್ಕೂ ಹೆಚ್ಚು ಕಮೆಂಟ್ಸ್ಗಳು ಹರಿದುಬಂದಿದೆ. ಇನ್ನು ಫೋಟೋ ಸನ್ನಿವೇಶದ ಬಗ್ಗೆ ವಿವರಣೆ ನೀಡಿರುವ ಅಮೆರಿಕ ವ್ಯಕ್ತಿ, ನನಗೆ ಇದು ಗೊಂದಲವಾಗಿದೆ. ನಾನು ಮೂವರು ಸ್ನೇಹಿತರೊಂದಿಗೆ ಇದ್ದೇನೆ. ಫೋಟೋ ತೆಗೆಯುವ ಸಮಯದಲ್ಲಿ ಮನೆಯಲ್ಲಿ ನಾನೊಬ್ಬನೆ ಇದ್ದೆ. ಫೋಟೋ ತೆಗೆದು ನೋಡಿದ ಬಳಿಕ ಅಡುಗೆ ಮನೆಯನ್ನು ಪರಿಶೀಲಿಸಿದೆ. ಆದರೆ, ಯಾರು ಇರಲಿಲ್ಲ. ಮನೆಯ ಮುಖ್ಯ ದ್ವಾರ ಮುಚ್ಚಲಾಗಿತ್ತು. ಕಿಟಕಿಗಳು ಕೂಡ ತೆರೆದಿರಲಿಲ್ಲ. ಆದರೆ, ಏನು ನಡೆದಿದೆ ಎಂಬುದರ ಬಗ್ಗೆ ಐಡಿಯಾ ಇಲ್ಲ ಎಂದಿರುವ ಆತ, ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿ ಕಾಳಜಿ ತೋರಿದ ನೆಟ್ಟಿಗರಿಗೆ ಧನ್ಯವಾದಗಳು ತಿಳಿಸಿದ್ದಾರೆ. (ಏಜೆನ್ಸೀಸ್)