ಹಳೇ ಗರ್ಲ್​ಫ್ರೆಂಡ್​ ಉಂಗುರ ಕದ್ದು ಹೊಸ ಗರ್ಲ್​ಫ್ರೆಂಡ್​ಗೆ ಪ್ರಪೋಸ್​ ಮಾಡಿದ ಭೂಪ!

love 2
Published on

ಫ್ಲೋರಿಡಾ: ವಿಚಿತ್ರವಾಗಿ ಪ್ರಪೋಸ್​ ಮಾಡುವವರನ್ನು ನೋಡಿರುತ್ತೀರಿ. ಇಲ್ಲೊಬ್ಬ ವ್ಯಕ್ತಿ ಪ್ರಪೋಸ್​ ಮಾಡಿದ್ದನ್ನು ಕೇಳಿದರೆ ನೀವು ಒಂದು ಕ್ಷಣ ದಂಗಾಗುತ್ತೀರಿ. ಹಳೇ ಗರ್ಲ್​ಫ್ರೆಂಡ್​ಗೆ ಕೊಟ್ಟಿದ್ದ ಉಂಗುರವನ್ನೇ ಕದ್ದು ಹೊಸ ಗರ್ಲ್​​ಫ್ರೆಂಡ್​ಗೆ ಪ್ರಪೋಸ್​ ಮಾಡಿದ ಭೂಪ ಇದೀಗ ಹಳೇ ಗರ್ಲ್​ಫ್ರೆಂಡ್​ ಕೋಪಕ್ಕೆ ಕಾರಣನಾಗಿದ್ದಾನೆ.

ಇಂತದ್ದೊಂದು ಘಟನೆ ಫ್ಲೋರಿಡಾದಲ್ಲಿ ನಡೆದಿದೆ. 48 ವರ್ಷದ ಕೋಸೆಫ್​ ಡೇವಿಸ್​ ಈ ಹಿಂದೆಯೇ ಯುವತಿಯೊಬ್ಬಳಿಗೆ ಉಂಗುರವನ್ನಿತ್ತು ಪ್ರೇಮ ತೋಡಿಕೊಂಡಿದ್ದ. ಅದಕ್ಕೆ ಆಕೆ ಒಪ್ಪಿ ಉಂಗುರ ಸ್ವೀಕರಿಸಿದ್ದಳು ಕೂಡ. ಅದಾದ ಮೇಲೆ ಇಬ್ಬರೂ ಚೆನ್ನಾಗಿಯೇ ಇದ್ದರು.

ಇತ್ತೀಚೆಗೆ ಆಕೆ ತನ್ನ ಪ್ರಿಯತಮನ ಫೇಸ್​ಬುಕ್​ ವಾಲ್​ ನೋಡುವಾಗ ಆತ ಯಾವುದೋ ಹುಡುಗಿಯೊಂದಿಗೆ ಇರುವುದು ಕಂಡುಬಂದಿದೆ. ಆ ಫೋಟೋವನ್ನು ಸರಿಯಾಗಿ ಗಮನಿಸಿದಾಗ, ಫೋಟೋದಲ್ಲಿರುವ ಯುವತಿ ತನ್ನ ಉಂಗುರದ ರೀತಿಯದ್ದೇ ಉಂಗುರ ತೊಟ್ಟಿರುವುದು ಕಂಡುಬಂದಿದೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಆಕೆ ತಕ್ಷಣ ತನ್ನ ಆಭರಣಗಳ ಬಾಕ್ಸ್​ ಪರಿಶೀಲಿಸಿದ್ದಾಳೆ. ಅದರಲ್ಲಿ ಎಲ್ಲ ಆಭರಣ ಇದ್ದು, ಅದೊಂದೇ ಉಂಗುರು ಕಳುವಾಗಿರುವುದು ತಿಳಿದುಬಂದಿದೆ. ಈ ವಿಚಾರ ಆಕೆಗೆ ಗೊತ್ತಾಗಿದೆ ಎನ್ನುವುದು ಗೊತ್ತಾದಿಗಿಂದ ಜೋಸೆಫ್ ಕಾಣೆಯಾಗಿದ್ದಾನೆ ಕೂಡ. ಇದೀಗ ಆತನ ವಿರುದ್ಧ ಯುವತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿಯ ಹುಡುಕಾಟದಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net