

ಮಥುರಾ: ತನ್ನ ಮನೆಯಲ್ಲಿ ಹಣ ಕದ್ದು, ನಂತರ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ, ತನಿಖೆಯ ದಿಕ್ಕು ಬದಲಿಸಲು ಯತ್ನಿಸಿದ ವ್ಯಕ್ತಿ ನಂತರ ಸಿಕ್ಕಿಬಿದ್ದಿದ್ದಾನೆ.
ಮಥುರಾದಲ್ಲಿ ಘಟನೆ ನಡೆದಿದೆ. ದಿಲೀಪ್ ಕುಮಾರ್ ಎಂಬಾತ ತನ್ನ ಮನೆಯಲ್ಲಿ ಸಹೋದರ ಇಟ್ಟಿದ್ದ 4,50,000 ರೂ.ನಗದನ್ನು ಕಳವು ಮಾಡಿದ್ದಾನೆ. ನಂತರ ಕತೆ ಕಟ್ಟಿದ್ದಾನೆ..ನಾಲ್ವರು ಅಪರಿಚಿತರು ಮಂಗಳವಾರ ರಾತ್ರಿ ನಮ್ಮ ಮನೆಗೆ ನುಗ್ಗಿ ಹಣ ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದ.
ಆದರೆ ವಿಚಾರಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಕೊನೆಗೂ ನಾನು, ನನ್ನ ಸಹಚರರೊಂದಿಗೆ ಸೇರಿ ಕಳವು ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ. ಹಾಗೇ, ಉದ್ಯೋಗ ಪಡೆಯಬೇಕಿತ್ತು. ಅದಕ್ಕಾಗಿ ಒಂದಷ್ಟು ಅಧಿಕಾರಿಗಳು ಲಂಚ ಕೇಳಿದ್ದರು. ಅದನ್ನು ಕೊಡಲು ಹಣ ಕದ್ದೆ ಎಂದೂ ಹೇಳಿದ್ದಾನೆ. ಕದ್ದ ಹಣವನ್ನು ವಾಪಸ್ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)