

ದೆಹಲಿ: ಸಿಗರೇಟ್ ಸೇದಬೇಡಿ ಎಂದು ಕೇಳಿದ್ದಕ್ಕೆ ಅಮಲಿನಲ್ಲಿದ್ದ ಯುವಕ, 38 ವರ್ಷದ ವ್ಯಕ್ತಿಯೊಬ್ಬನಿಗೆ ಕತ್ತರಿಯಿಂದ ಹಲವು ಬಾರಿ ಇರಿದಿರುವ ಘಟನೆ ನೈಋತ್ಯ ದೆಹಲಿಯ ಕಿಶನ್ಗಢದಲ್ಲಿ ನಡೆದಿದೆ.
ಘಟನೆಯಲ್ಲಿ ಅಭಯ್ ಕುಮಾರ(38) ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಮೋಹಿತ್ ಮಹ್ಲಾವತ್(22) ಎಂಬಾತನೇ ಕತ್ತರಿಯಿಂದ ಇರಿದ ಆರೋಪಿ.
ಭಾನುವಾರದಂದು ಮೋಹಿತ್ ಕ್ಷೌರ ಮಾಡಿಸಿಕೊಳ್ಳಲೆಂದು ಅಭಯ್ನ ಕ್ಷೌರಿಕನ ಅಂಗಡಿಗೆ ಬಂದಿದ್ದ. ಈ ವೇಳೆ ಅಭಯ್ ಕ್ಷೌರ ಮಾಡಲು ಬೇರೆಡೆ ಹೋಗಿದ್ದನು. ಸ್ವಲ್ಪ ಸಮಯದ ನಂತರ ಅಂಗಡಿಗೆ ವಾಪಸ್ಸು ಬಂದು ನೋಡಿದಾಗ ಮೋಹಿತ್ ಅಂಗಡಿಯಲ್ಲಿ ಧೂಮಪಾನ ಮಾಡುತ್ತಿದ್ದ.
ಈ ವೇಳೆ ಅಭಯ್, ಮೋಹಿತ್ನಿಗೆ ಅಂಗಡಿಯಲ್ಲಿ ಸಿಗರೇಟ್ ಸೇದಬೇಡ, ಹೊರಗಡೆ ಹೋಗಿ ಧೂಮಪಾನ ಮಾಡುವಂತೆ ಹೇಳಿದ್ದ. ಆದರೆ ಅಮಲಿನಲ್ಲಿದ್ದ ಮೋಹಿತ್ ಈ ಮಾತನ್ನು ತಿರಸ್ಕರಿಸಿದ್ದಾನೆ. ಕೊನೆಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಮೋಹಿತ್ ಕತ್ತರಿಯಿಂದ ಅಭಯ್ಗೆ ಹಲವು ಬಾರಿ ಇರಿದಿದ್ದಾನೆ.
ಕೂಡಲೇ ಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಬೀರವಾಗಿ ಗಾಯಗೊಂಡಿದ್ದಾನೆ. ಇನ್ನು, ಈತನ ಹೇಳಿಕೆಯನ್ನು ಆಧರಿಸಿ ಮೋಹಿತ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್)