‘ಭಾಯ್’ ಎಂದು ಕರೆಯಲಿಲ್ಲ!; ಗುಂಪು ಘರ್ಷಣೆಯಲ್ಲಿ ಹೋಯಿತು ಇಬ್ಬರ ಜೀವ

Untitled design - 2023-10-10T181509.693
Published on

ನವದೆಹಲಿ: ಗುಂಪು ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಮೂರನೇ ವ್ಯಕ್ತಿ ತೀವ್ರವಾಗಿ ಗಾಯಗೊಂಡ ಘಟನೆ ನವದೆಹಲಿಯ ಅಶೋಕ್ ವಿಹಾರ್‌ನಲ್ಲಿ ಸಂಭವಿಸಿದೆ.

ರಘು, ಜಾಕೀರ್ ಮತ್ತು ಭೂರಾ ಎಂಬ ಮೂವರು ದಾಬ್ಲು ಎಂಬ ಮತ್ತೊಬ್ಬ ವ್ಯಕ್ತಿಯನ್ನು ಭೇಟಿ ಮಾಡಲು ಅಶೋಕ್ ವಿಹಾರ್‌ಗೆ ಬಂದಾಗ ಸಣ್ಣ ಭಿನ್ನಾಭಿಪ್ರಾಯದಿಂದ ಬುಗಿಲೆದ್ದ ತೀವ್ರ ವಾಗ್ವಾದ, ಎರಡು ಜೀವಗಳನ್ನು ಬಲಿಪಡೆದುಕೊಳ್ಳುವ ಮೂಲಕ ಅಂತ್ಯಗೊಂಡಿದೆ.

ಘಟನೆಯ ವಿವರ: ರಘು, ಜಾಕೀರ್ ಮತ್ತು ಭೂರಾ ಎಂಬ ಮೂವರು ನಗರ ಪ್ರದೇಶದಲ್ಲಿ ಡಬ್ಲು ಎಂಬ ವ್ಯಕ್ತಿಯನ್ನು ಭೇಟಿಯಾಗಲು ಹುಡುಕಿಕೊಂಡು ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಓರ್ವ ವ್ಯಕ್ತಿಯ ಬಳಿ ವಿಚಾರಿಸಿದಾಗ ಆತ, "ಡಬ್ಲು ಎಂದು ಹೇಳಬೇಡ, ಡಬ್ಲು ಭಾಯ್ ಎಂದು ಕರೆಯಬೇಕು" ಎಂದು ಹೇಳಿದ್ದಾನೆ. ಕೂಡಲೇ ಯುವಕರ ನಡುವೆ ಮಾತಿನ ಜಟಾಪಟಿ ತಾರಕಕ್ಕೇರಿದ್ದು, ಒಬ್ಬರನೊಬ್ಬರು ಬಡಿದಾಡಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣಗೊಂಡಿತು.

ಕ್ಷಣಮಾತ್ರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಈ ಗುಂಪು ಘರ್ಷಣೆಯಲ್ಲಿ ರಘು ಎಂಬುವನು ಡಬ್ಲು ಮೇಲೆ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತೀಕಾರವಾಗಿ, ಡಬ್ಲು ಸಹಚರರು ರಘು ಮೇಲೆ ಗುಂಡು ಹಾರಿಸಿದ್ದಾರೆ. ಗುಂಡೇಟಿಗೆ ತುತ್ತಾದ ರಘು, ಸ್ಥಳದಲ್ಲೇ ಸಾವನ್ನಪ್ಪಿದ. ಇಬ್ಬರು ಸ್ನೇಹಿತರಾದ ಜಾಕಿರ್ ಮತ್ತು ಭುರಾ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಡಬ್ಲು ಸಹಚರರು ಇಬ್ಬರನ್ನು ಬೆನ್ನಟ್ಟಿ ಹಿಡಿದರು.

ಈ ವೇಳೆ ಭುರಾನನ್ನು ಇರಿದು ಹತ್ಯೆಗೈದ ನಂತರ ಝಾಕಿರ್ ಮತ್ತೆ ಅವರ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಘಟನೆಯ ಆರೋಪಿಗಳನ್ನು ಸದ್ಯ ದೆಹಲಿ ಪೊಲೀಸರು ಬಂಧಿಸಿದ್ದಾರೆ. ದಾಬ್ಲು ಆಸ್ಪತ್ರೆಗೆ ದಾಖಲಾಗಿದ್ದು, ಆತನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಪೊಲೀಸರು ದಾಬ್ಲು ಸಹಚರರಿಗಾಗಿ ಹುಡುಕಾಟ ನಡೆಸುತ್ತಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net