

ಅಲಹಾಬಾದ್: ಈಗ ಎಲ್ಲೆಲ್ಲೂ ಕರೊನಾ ವೈರಸ್ ಬಗ್ಗೆಯೇ ಮಾತು. ನಿಜಾಮುದ್ದೀನ್ ಮರ್ಖಜ್ನ ಧಾರ್ಮಿಕ ಸಭೆಯ ನಂತರ ಕರೊನಾ ಪ್ರಸರಣದ ಪ್ರಮಾಣ ಮಿತಿಮೀರಿದ್ದರಿಂದ ಬಹುತೇಕರ ಬಾಯಲ್ಲಿ ಸಹಜವಾಗಿ ಅದರ ಚರ್ಚೆ ನಡೆಯುತ್ತಿದೆ. ಆದರೆ ಅದೀಗ ಒಂದು ಹತ್ಯೆಗೆ ಕಾರಣವಾಗಿದ್ದು ಆತಂಕಕಾರಿ ಬೆಳವಣಿಗೆ.
ಪ್ರಯಾಗ್ರಾಜ್ನಲ್ಲಿ ಭಾನುವಾರ ಘಟನೆ ನಡೆದಿದೆ. 23 ವರ್ಷದ ಲೋಟನ್ ನಿಷಾದ್ ಎಂಬ ಯುವಕನನ್ನು ಮತ್ತೋರ್ವ ಯುವಕನ ಗುಂಡು ಹೊಡೆದು ಹತ್ಯೆ ಮಾಡಿದ್ದಾನೆ.
ನಿಷಾದ್ ಕರೇಲಿಯ ಭಕ್ಷಿ ಗ್ರಾಮದಲ್ಲಿ ಟೀ ಸ್ಟಾಲ್ವೊಂದರ ಬಳಿ ಕರೊನಾ ವೈರಸ್ ವಿಚಾರವಾಗಿಯೇ ಮಾತನಾಡುತ್ತಿದ್ದ. ಹಲವು ಜನ ಆತನ ಮಾತನ್ನು ಕೇಳುತ್ತಿದ್ದರು. ಹೀಗೆ ಮಾತನಾಡುತ್ತ ನಿಷಾದ್ ತಬ್ಲಿಘಿ ಜಮಾತ್ನ ಧಾರ್ಮಿಕ ಸಭೆಯ ಬಗ್ಗೆಯೂ ಕಾಮೆಂಟ್ ಮಾಡಿದ. ಕೊವಿಡ್ -19 ಅಷ್ಟು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದ್ದರೂ ಸಭೆ ನಡೆಸಿದ್ದು ಸರಿಯಲ್ಲ ಎಂಬರ್ಥದಲ್ಲಿ ಮಾತನಾಡುತ್ತಿದ್ದ. ಅಲ್ಲದೆ ತಬ್ಲಿಘಿ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ.
ಇದೇ ವೇಳೆ ಅಲ್ಲೇ ರಸ್ತೆಯಲ್ಲಿ ಹೋಗುತ್ತಿದ್ದ ಯುವಕರ ಗುಂಪೊಂದು ಬಂದು ನಿಷಾದ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಅದು ಗಲಾಟೆಗೆ ಕಾರಣವಾಯಿತು. ಪರಿಸ್ಥಿತಿ ಬಿಗಡಾಯಿಸುವುದನ್ನು ನೋಡಿದ ಅಲ್ಲಿಯೇ ಇದ್ದ ಓರ್ವ ಮತ್ತೊಂದಷ್ಟು ಜನರನ್ನು ಕರೆದುಕೊಂಡು ಬರಲು ಹಳ್ಳಿಯೊಳಕ್ಕೆ ಹೋದ. ಆದರೆ ದಾರಿಹೋಕ ಯುವಕರು ಸುಮ್ಮನಾಗದೆ ನಿಷಾದ್ಗೆ ಗುಂಡು ಹೊಡೆದಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಪೊಲೀಸರು ಇದನ್ನು ಖಚಿತಪಡಿಸಿದ್ದಾರೆ.
ಗುಂಡಿನ ದಾಳಿ ನಡೆಸಿದವರ ಮೇಲೆ ಗ್ರಾಮಸ್ಥರು ದಾಳಿ ನಡೆಸಿದರು. ಆದರೆ ಓರ್ವ ಮಾತ್ರ ಸಿಕ್ಕಿಬಿದ್ದಿದ್ದಾನೆ. ಉಳಿದವರೆಲ್ಲ ಪರಾರಿಯಾಗಿದ್ದಾರೆ. ನಿಷಾದ್ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)