

ವಾರಂಗಲ್: ಒಂಭತ್ತು ವಲಸೆ ಕಾರ್ಮಿಕರನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಇಂದು ವಾರಂಗಲ್ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ದುರುಳ ಮೇ 21ರಂದು ಪಶ್ಚಿಮ ಬಂಗಾಳ ಮತ್ತು ತ್ರಿಪುರಾದ ಒಟ್ಟು 9 ವಲಸೆ ಕಾರ್ಮಿಕರನ್ನು ವಾರಂಗಲ್ ಗ್ರಾಮಾಂತರ ಜಿಲ್ಲೆಯ ಗೊರೆಕುಂಟಾ ಎಂಬ ಗ್ರಾಮದಲ್ಲಿ ಹತ್ಯೆ ಮಾಡಿದ್ದ.
ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ವಾರಂಗಲ್ ಸೆಷನ್ಸ್ ಕೋರ್ಟ್ನ ನ್ಯಾಯಾಧೀಶ ಕೆ. ಜಯಕುಮಾರ್ ಅವರು ಆರೋಪಿಗೆ ಮರಣದಂಡನೆ ವಿಧಿಸಿದ್ದಾರೆ. ಪ್ರಕರಣದ ವಿಚಾರಣೆ 36ದಿನಗಳಲ್ಲಿ ಮುಕ್ತಾಯವಾಗಿತ್ತು. ಆದರೆ ಕೊವಿಡ್-19 ಲಾಕ್ಡೌನ್ನಿಂದಾಗಿ ಕೋರ್ಟ್ಗಳು ಬಾಗಿಲು ಹಾಕಿದ್ದವು. ಇದರಿಂದಾಗಿ ತೀರ್ಪು ಬರುವುದು ತಡವಾಯಿತು.
ಸಂಜಯ್ಕುಮಾರ್ ಯಾದವ್ (24) ಆರೋಪಿ. ಈತ ಪಶ್ಚಿಮ ಬಂಗಾಳ ಮೂಲದ 56 ವರ್ಷದ ಮಕ್ಸೂದ್ ಆಲಂ ಸೇರಿ ಅವರ ಕುಟುಂಬದವರನ್ನೆಲ್ಲ ಹತ್ಯೆ ಮಾಡಿದ್ದ. ಮಕ್ಸೂದ್ ಆಲಂ ಗೋರೆಕುಂಟಾದಲ್ಲಿ ಗೋಣಿಚೀಲ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕುಟುಂಬಕ್ಕೆ ಸೇರಿದ, ಆಂಧ್ರದಲ್ಲಿ ವಾಸವಾಗಿದ್ದ ಮಹಿಳೆಯೋರ್ವರನ್ನು ಅದಕ್ಕೂ ಮೊದಲೇ ಹತ್ಯೆ ಮಾಡಿದ್ದ. ಆ ಮಹಿಳೆಯನ್ನು ಕೊಂದ ಬಳಿಕ ಇಲ್ಲಿಗೆ ಬಂದು ಆಲಂ, ಅವರ ಪತ್ನಿ, ಇಬ್ಬರು ಪುತ್ರರು, ಮಗಳು, ಮೊಮ್ಮಗಳನ್ನು ಕೊಂದಿದ್ದ. ಅಷ್ಟೇ ಅಲ್ಲ, ಇವರ ಕುಟುಂಬಕ್ಕೆ ಸಂಬಂಧವೇ ಇಲ್ಲದಿದ್ದರೂ ಇನ್ನಿಬ್ಬರು ವಲಸೆ ಕಾರ್ಮಿಕರನ್ನು ಹತ್ಯೆ ಮಾಡಿದ್ದ. ಈ ಇಬ್ಬರಲ್ಲಿ ಓರ್ವ ಬಿಹಾರದವನು ಮತ್ತೋರ್ವ ತ್ರಿಪುರದವನು.
ಮೇ 21ರಂದು ಆಲಂ ಅವರ ಹುಟ್ಟಿದ ದಿನ ಇತ್ತು. ಅಂದು ಯಾದವ್ ಆಲಂ ಕೆಲಸ ಮಾಡುತ್ತಿದ್ದ ಗೋಣಿ ಚೀಲ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದ. ಅಂದು ಆಲಂ ಕುಟುಂಬದವರು ಮತ್ತು ಮೂವರು ವಲಸೆ ಕಾರ್ಮಿಕರು ಆ ಪಾರ್ಟಿಯಲ್ಲಿ ಇದ್ದರು. ಯಾದವ್ ಅಂದು ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಹೋಗಿ ತಿಂಡಿಯಲ್ಲಿ ಬೆರೆಸಿದ್ದ. ಬಳಿಕ ಆ ತಿಂಡಿಯನ್ನು ಅಲ್ಲಿದ್ದವರು ಸೇವಿಸಿದ್ದರು. ಇದನ್ನೂ ಓದಿ: ದುಬಾರಿ ಬೆಲೆಯ ಸ್ವಂತ ಮರ್ಸಿಡೀಸ್ ಕಾರಿಗೆ ಬೆಂಕಿ ಇಟ್ಟ ಬ್ಲಾಗರ್: ಕಾರಣ ಕೇಳಿದ್ರೆ ಅಚ್ಚರಿ ಖಂಡಿತ!
ನಿದ್ದೆ ಮಾತ್ರೆ ಬೆರೆಸಿದ್ದ ಆಹಾರ ಸೇವನೆ ಮಾಡಿದ್ದವರೆಲ್ಲ ರಾತ್ರಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು. ಎಚ್ಚರ ತಪ್ಪಿದ್ದ ಅವರನ್ನೆಲ್ಲ ಎಳೆದುಕೊಂಡು ಹೋದ ಯಾದವ್ ಒಂದು ಬಾವಿಗೆ ಎಸೆದಿದ್ದ. ಈ ಹತ್ಯೆಯ ತನಿಖೆ ಶುರು ಮಾಡಿದ್ದ ಪೊಲೀಸರು ಜುಲೈ 28ರಂದು ಚಾರ್ಜ್ ಶೀಟ್ ಸಲ್ಲಿಸಿದ್ದರು.
ಇಂದು ತೀರ್ಪು ನೀಡುವ ವೇಳೆ ಕೋರ್ಟ್ನ ಆವರಣದಲ್ಲಿ ಭರ್ಜರಿ ಜನ ಸೇರಿದ್ದರು. ನ್ಯಾಯಾಧೀಶರು ಜಡ್ಜ್ಮೆಂಟ್ ನೀಡುತ್ತಿದ್ದಂತೆ ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಹತ್ಯೆ ಕೇಸ್ಗೆ ಸಂಬಂಧಪಟ್ಟಂತೆ ಪೊಲೀಸರು ತುಂಬ ಚುರುಕಾಗಿ ಕೆಲಸ ಮಾಡಿದ್ದರು. ಸುಮಾರು 62 ಸಾಕ್ಷಿಗಳನ್ನು ಒದಗಿಸಿದ್ದರು.(ಏಜೆನ್ಸೀಸ್)