ಮಗಳಿಗೆ ನಿದ್ದೆ ಮಾತ್ರೆ ಕೊಟ್ಟು ರಾತ್ರಿಯಿಡೀ ಅತ್ಯಾಚಾರ ಮಾಡಿದ ಕಾಮುಕ ತಂದೆ

A youth
Published on

ಬೆಂಗಳೂರು: 40 ವರ್ಷದ ತಂದೆ ತನ್ನ 19 ವರ್ಷದ ಮಗಳಿಗೆ ನಿದ್ದೆ ಮಾತ್ರೆ ಕೊಟ್ಟು, ಬಳಿಕ ಅತ್ಯಾಚಾರ ಮಾಡಿದ ಹೀನಾಯ ಘಟನೆ ಬೆಂಗಳೂರಿನ ಹರಲೂರಿನಲ್ಲಿ ನಡೆದಿದೆ.

ತನಗೆ ಶೀತ, ಕೆಮ್ಮು ಶುರುವಾಗಿದೆ ಎಂದ ಮಗಳಿಗೆ ಔಷಧಿ ಕೊಡುತ್ತೇನೆ ಎಂದು ಹೇಳಿದ ಕಾಮುಕ ತಂದೆ ನಿದ್ದೆ ಮಾತ್ರೆ ಕೊಟ್ಟಿದ್ದಾನೆ. ಅದು ನಿದ್ದೆ ಮಾತ್ರೆ ಎಂದು ತಿಳಿಯದ ಯುವತಿ ಅದನ್ನು ಸೇವಿಸಿದ್ದಾಳೆ. ಮಾತ್ರೆ ತೆಗೆದುಕೊಂಡ ಕೆಲವೇ ಕ್ಷಣದಲ್ಲಿ ಗಾಢ ನಿದ್ದೆಗೆ ಜಾರಿದ್ದಾಳೆ. ಆದರೆ ಮರುದಿನ ಏಳುವಷ್ಟರಲ್ಲಿ ತಂದೆ ಪಕ್ಕದಲ್ಲಿಯೇ ಇದ್ದ...ತನ್ನ ಮೇಲೆ ಅತ್ಯಾಚಾರ ಆಗಿದೆ ಎಂಬುದು ಆಕೆಗೆ ಗೊತ್ತಾಗಿಬಿಟ್ಟಿತ್ತು.

ಆಕೆಗೆ ಅಮ್ಮ ಇಲ್ಲ. ಅಪ್ಪನ ಎರಡನೇ ಹೆಂಡತಿ ಅಂದರೆ ಮಲತಾಯಿಯ ಬಳಿ ಹೋಗಿ ವಿಷಯ ತಿಳಿಸಿದ್ದಾಳೆ. ಪೊಲೀಸರಿಗೆ ದೂರು ಕೊಡಬೇಕು ನನ್ನೊಂದಿಗೆ ಬಾ ಎಂದರೆ ಆ ಮಲತಾಯಿ ಸಹಕರಿಸಲಿಲ್ಲ. ಇದರಿಂದ ತೀವ್ರ ಬೇಸತ್ತ ಯುವತಿ ಶೌಚಗೃಹ ಸ್ವಚ್ಛಗೊಳಿಸುವ ರಾಸಾಯನಿಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷ ಸೇವಿಸಿ ಪೊಲೀಸ್​ ಠಾಣೆಗೆ ಹೋಗಿ ಎಲ್ಲ ವಿಚಾರವನ್ನೂ ತಿಳಿಸಿದ್ದಾಳೆ. ತನ್ನ ಸ್ವಂತ ತಂದೆಯಿಂದಲೇ ರೇಪ್​ಗೆ ಒಳಗಾಗಿದ್ದೇನೆ. ಇದೆಲ್ಲ ನನ್ನ ಚಿಕ್ಕಮ್ಮನಿಗೆ ಗೊತ್ತಿದ್ದರೂ ಅವರು ಸುಮ್ಮನಿದ್ದಾರೆ ಎಂದು ದೂರು ನೀಡಿ, ಅಲ್ಲೇ ಅಸ್ವಸ್ಥಳಾಗಿ ಬಿದ್ದಿದ್ದಾಳೆ. ಇದನ್ನೂ ಓದಿ: ಕ್ರೌರ್ಯಕ್ಕೆ ಎಲ್ಲೆ ಎಲ್ಲಿ? ಈ ಮಂಗನ ಸ್ಥಿತಿ ನೋಡಿ ಪಾಪ! ವಿಡಿಯೋ ವೈರಲ್

ನಂತರ ಪೊಲೀಸರೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಅವಳಿನ್ನೂ ಸಂಪೂರ್ಣ ಗುಣಮುಖಳಾಗಿಲ್ಲ. ಆಕೆಯ ತಂದೆಯನ್ನು ವಶಕ್ಕೆ ಪಡೆಯಲಾಗಿದ್ದು, ಕೃತ್ಯದಲ್ಲಿ ಆತನ ಎರಡನೇ ಪತ್ನಿಯ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net