

ಕೋಲಾರ: ತಂತ್ರಜ್ಞಾನ ಬೆಳೆಯುತ್ತಿರುವಂತೆ ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ. ತನಗೆ ತಾನೇ ಕುತ್ತು ತಂದುಕೊಳ್ಳುತ್ತಿದ್ದಾನೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾರತೀಯ ಹವಾಮಾನ ಇಲಾಖೆ, ಗ್ರಾಮ ವಿಕಾಸ ಸಂಸ್ಥೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಸಿ-ಶೀತಗಾಳಿ ಮತ್ತು ಹವಾಮಾನ ಘಟನೆಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿರು.
ನಮ್ಮ ಬದುಕನ್ನು ಬೇರೆಯವರು ಹಾಳು ಮಾಡಬೇಕಾಗಿಲ್ಲ. ನಾವು ನಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದೇವೆ. ನೀರು ಇದ್ದ ಕಡೆ ಸಂಸತಿ, ಜೀವಾಳ, ನಾಗರಿಕತೆ ಇರುತ್ತದೆ. ಪ್ರತಿಯೊಬ್ಬರಿಗೂ ಸಮಾಜದ ಮೇಲೆ ಒಂದಿಷ್ಟು ತುಡಿತ, ಕಾಳಜಿ, ಪ್ರೀತಿ ಇರಬೇಕು ಎಂದು ತಿಳಿಸಿದರು.
ನಿಸರ್ಗ ಇರುವುದು ಮನುಷ್ಯನ ಅವಶ್ಯ ಪೂರೈಸಲು ಮಾತ್ರ, ದುರಾಸೆ ಪೂರೈಸಲು ಅಲ್ಲ. ಎಲ್ಲರೂ ಸಂಪಾದನೆ ಮಾಡುವುದು, ಖರ್ಚು ಮಾಡುವುದರಲ್ಲಿ ತಲ್ಲೀನರಾಗಿ ನಿಸರ್ಗದಿಂದ ದೂರು ಸರಿಯುವ ಮೂಲಕ ಸುತ್ತಲಿನ ಪರಿಸರ ರ್ನಿಲಕ್ಷಿಸುತ್ತಿದ್ದಾರೆ. ಇದರಿಂದಾಗಿಯೇ ಹೆಚ್ಚಿನ ಅನಾಹುತ ಉಂಟಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಪತ್ತು ಸ್ಥಳದಲ್ಲಿ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ನಡೆಯಬೇಕು. ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು. ಮಾಧ್ಯಮದವರ ಜತೆಗೆ ಸ್ವಯಂ ಸೇವಾ ಸಂಸ್ಥೆಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದು ತಿಳಿಸಿದರು.
ಜಿಲ್ಲೆಯಿಂದ ಜಿಲ್ಲೆಗೆ ನೈಸರ್ಗಿಕ ವಿಕೋಪದ ಸ್ವರೂಪವೇ ಬೇರೆ ಇರುತ್ತದೆ. ಅದಕ್ಕೆ ತಕ್ಕಂತೆ ವಿಪತ್ತು ನಿರ್ವಹಣೆಗೆ ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು. ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತು ಇರುತ್ತವೆ. ವಿಪತ್ತು ಪೂರ್ವ ತಯಾರಿ, ವಿಪತ್ತು ಸಂಭವಿಸಿದಾಗ ನಿಭಾಯಿಸುವ ರೀತಿ, ವಿಪತ್ತು ಸಂಭವಿಸಿದ ನಂತರ ಏನು ಮಾಡಬೇಕು ಎಂಬುದರ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದು ತಿಳಿಸಿದರು.
ಗುಡ್ಡ ಕುಸಿದಾಗ, ಪ್ರವಾಹ ಸಂಭವಿಸಿದಾಗ ಸಂಪರ್ಕ ಮಹತ್ವದ್ದು. ತೆರವು ಮಾಡುವುದು ಸವಾಲು. ಆದರೆ, ಮಾಧ್ಯಮ ನಿರ್ವಹಣೆ ಮಾಡುವುದು ದೊಡ್ಡ ಸವಾಲು. ಜನರೊಂದಿಗೆ ಸಂಪರ್ಕ, ಸಂವಹನ ಕೌಶಲ ಮಹತ್ವದ್ದು. ಜತೆಗೆ ವದಂತಿ ಜೋರಾಗುತ್ತದೆ. ಇದರಿಂದ ಜನರ ಆತಂಕ ಹೆಚ್ಚುತ್ತದೆ. ಜಗಳದಿಂದ ಎಲ್ಲೋ ಒಂದು ಕಡೆ ಬೆಂಕಿ ಬಿದ್ದರೆ ಇಡೀನಗರ ಹೊತ್ತಿ ಉರಿಯುತ್ತಿದೆ ಎಂದು ಸುದ್ದಿ ನೀಡಿದರೆ ಹೇಗೆ? ಪರಿಶೀಲಿಸಿ ವರದಿ ಮಾಡಬೇಕು ಎಂದು ಸಲಹೆ ನೀಡಿದರು.
ಅಭಿವೃದ್ಧಿ ಕಾರ್ಯಕರ್ತ ಸುದೀಪ್, ಎಎಂಒ, ಕೆಐಎಎಲ್ ನಿರ್ದೇಶಕ ಸಿ.ಎಸ್.ಪಟೇಲ್, ಬೆಂಗಳೂರಿನ ಎಂಸಿ ಯೋಜನಾ ವಿಜ್ಞಾನಿ ಷೇಕ್ ದರ್ಗಾ ಸಾಹೇಬ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಗ್ರಾಮ ವಿಕಾಸ ಸಂಸ್ಥೆಯ ರಾಮಕೃಷ್ಣೇಗೌಡ, ರಾಜ ಹುಣಸೂರು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಇದ್ದರು.
* ಕೆ-ರಾಟ್ ಉದ್ಘಾಟನೆ
ಜಿಲ್ಲಾಡಳಿತದಿಂದ ವಿಪತ್ತು ನಿರ್ವಹಣೆಗೆ ಕೆ&ರಾಟ್ (ಕೋಲಾರ ರಾಪಿಡ್ ಆಕ್ಷನ್ ಟೀಮ್) ಶುರು ಮಾಡಲು ಸಿದ್ಧತೆ ಕೈಗೊಂಡಿದ್ದೇವೆ. ಇದನ್ನು ಎಲ್ಲ ತಾಲೂಕುಗಳಿಂದ ಸೇರಿ 200 ಸ್ವಯಂ ಸೇವಕರು ಇರುತ್ತಾರೆ. ಸದ್ಯದಲ್ಲಿ ಉದ್ಘಾಟನೆ ಮಾಡಿ ತರಬೇತಿ ನೀಡಲಾಗುವುದು ಎಂದು ಡಾ.ಎಂ.ಆರ್.ರವಿ ತಿಳಿಸಿದರು.
* ನಿಖರವಾದ ವಿಚಾರ ಮುಟ್ಟಿಸಿ
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಏಕೆ ಉಂಟಾಗುತ್ತಿದೆ ಎಂಬುದನ್ನು ಅರಿಯಬೇಕು. ಸಮಾಜಕ್ಕೆ ನಿಖರವಾದ ವಿಚಾರ ಮುಟ್ಟಿಸಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಹೇಳಿದರು. ಹವಾಮಾನ ವೈಪರೀತ್ಯ ವಿಚಾರದಲ್ಲಿ ಪತ್ರಕರ್ತರ ಜ್ಞಾನ ವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
* ನೈಸರ್ಗಿಕ ಏರುಪೇರು ಸಹಜ
ಅಭಿವೃದ್ಧಿ ಕಾರ್ಯಗಳಿಂದಾಗಿ ಭೂಕುಸಿತ ಹೆಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಬರಗಾಲ, ಮಳೆ, ಬಿಸಿಲ ತಾಪಕ್ಕೆ ಸಿಲುಕಿ ಸತ್ತವರಿಗಿಂತ ಸಿಡಿಲು ಬಡಿದು ಸತ್ತವರೇ ಅಧಿಕ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಕೆ.ಜೆ.ರಮೇಶ್ ಹೇಳಿದರು. ಕೋಲಾರದಲ್ಲಿ ಬರಗಾಲ ಪರಿಸ್ಥಿತಿ ಆಗಾಗ್ಗೆ ಸಂಭವಿಸುತ್ತಿರುತ್ತದೆ. ಹೀಗೆ, ಪ್ರತಿ ಜಿಲ್ಲೆಯಲ್ಲಿ ಒಂದಿಲ್ಲೊಂದು ನೈಸರ್ಗಿಕ ವಿಪತ್ತು ಸಂಭವಿಸುತ್ತದೆ. ಕೆಲವೊಮ್ಮೆ ಅದರ ತೀವ್ರತೆ ಹೆಚ್ಚುತ್ತದೆ. ಹಿಂದೆ ವರ್ಷಕ್ಕೆ ಒಮ್ಮೆ ಸಂಭವಿಸುತ್ತಿದ್ದದ್ದು, ಈಗ ಮೂರ್ನಾಲ್ಕು ಬಾರಿ ಸಂಭವಿಸುತ್ತಿದೆ. ಕೆಲವೆಡೆ ಎರಡಕ್ಕಿಂತ ಹೆಚ್ಚು ವಿಪತ್ತು ಸಂಭವಿಸುತ್ತಿವೆ. ಋತುಮಾನಕ್ಕೆ ತಕ್ಕಂತೆ ನೈಸರ್ಗಿಕ ಏರುಪೇರು ಸಹಜ. ಒಂದು ಕಡೆ ಕಡಿಮೆ ಮಳೆ, ಮತ್ತೊಂದು ಕಡೆ ಹೆಚ್ಚು ಮಳೆಯಾಗುತ್ತದೆ. ಹವಾಮಾನ ಬದಲಾವಣೆಯಿಂದ ಇದರ ತೀವ್ರತೆ ಹೆಚ್ಚಾಗಿದೆ ಎಂದು ತಿಳಿಸಿದರು.