ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ ಎಂದು ಕೆಲಸ ಸಿಕ್ಕ ಕೂಡಲೇ ಆತ್ಮಹತ್ಯೆ ಮಾಡಿಕೊಂಡ...!

Bank Job
Published on

ಕೆಲಸವಿಲ್ಲ ಎಂದು ಪರಿತಪಿಸುತ್ತಿದ್ದ ವ್ಯಕ್ತಿ, ಒಂದೊಳ್ಳೆ ಉದ್ಯೋಗ ಸಿಕ್ಕ ತಕ್ಷಣ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದಾಗಿ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾನೆ.

ತಮಿಳುನಾಡಿನ ನಾಗರ್​​​ಕೊಯಿಲ್​​ ನಿವಾಸಿ ನವೀನ್​ (32) ಮೃತ. ಜೀವನದಲ್ಲಿ ತುಂಬ ದಿನಗಳಿಂದ ಉದ್ಯೋಗ ಸಿಕ್ಕಿರಲಿಲ್ಲ ಎಂದು ನೊಂದಿದ್ದ. ಹಾಗೇ 'ನನಗೊಂದು ಒಳ್ಳೆಯ ಕೆಲಸ ಸಿಕ್ಕಿಬಿಟ್ಟರೆ ನಾನು ಬಂದು ನಿನ್ನೊಂದಿಗೇ ಇರುತ್ತೇನೆ' ಎಂದು ದೇವರಿಗೆ ಹರಕೆಯನ್ನೂ ಕಟ್ಟಿಕೊಂಡಿದ್ದ.

ಅದಾದ ಕೆಲವೇ ದಿನಗಳಲ್ಲಿ ನವೀನ್​ಗೆ ಬ್ಯಾಂಕ್​ ಆಫ್​ ಇಂಡಿಯಾದ ಮುಂಬೈ ಬ್ರ್ಯಾಂಚ್​​​ನಲ್ಲಿ ಒಂದೊಳ್ಳೆ ಉದ್ಯೋಗವೂ ಸಿಕ್ಕಿತು. ಆದರೆ ನವೀನ್ ಅಲ್ಲಿ​ ಕೆಲಸ ಮಾಡಿದ್ದು 15 ದಿನಗಳು ಮಾತ್ರ.

ಶುಕ್ರವಾರ ತನ್ನ ತಿರುವನಂತಪುರಂಗೆ ವಿಮಾನದ ಮೂಲಕ ತೆರಳಿದ ನವೀನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾನು ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು. ನನಗೆ ಉದ್ಯೋಗ ಕೊಡು ಎಂಬ ಬೇಡಿಕೆಯನ್ನು ದೇವರು ಈಡೇರಿಸಿದ್ದಾನೆ. ಹಾಗೇ ಅವನೊಂದಿಗೇ ಇರಲು ನಾನು ಅಲ್ಲಿಯೇ ಹೋಗುತ್ತೇನೆ ಎಂದು ಡೆತ್​ನೋಟ್​ ಬರೆದಿಟ್ಟಿದ್ದಾನೆ. ನಾಗರ್‌ಕೋಯಿಲ್ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಕ್ಕೆ ಪಡೆದಿದ್ದಾರೆ.

ನವೀನ್​ ಸಾವಿಗೆ ಬೇರೆ ಇನ್ನೇನಾದರೂ ಕಾರಣ ಇರಬಹುದಾ ಎಂದು ಪೊಲೀಸರು ತನಿಖೆ ಶುರು ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net