ಹೆಮ್ಮೆಯಿಂದ ಮಾತೃಭಾಷೆ ಮಾತನಾಡಿ: ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ

PM Modi
Published on

ನವದೆಹಲಿ: ಪ್ರಖ್ಯಾತ ಭಾರತೀಯ ಹಾಡುಗಳನ್ನು ತಮ್ಮದೇ ವಿಶೇಷ ಶೈಲಿಯಲ್ಲಿ ವಿವಿಧ ಭಾಷೆಗಳಲ್ಲಿ ವಿಡಿಯೋ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಯುವಜನತೆಗೆ ಭಾನುವಾರ ಕರೆ ನೀಡಿದ್ದಾರೆ. ಹಾಗೆ ಮಾಡುವುದರಿಂದ ಗೀತೆಗಳು ಜನಪ್ರಿಯವಾಗುವುದಲ್ಲದೆ ಹೊಸ ತಲೆಮಾರಿಗೆ ನಮ್ಮ ದೇಶದ ವೈವಿಧ್ಯವನ್ನು ಪರಿಚಯಿಸಲು ಸಾಧ್ಯವಾಗುತ್ತದೆ ಎಂದು 86ನೇ ಮಾಸಿಕ ರೇಡಿಯೊ ಭಾಷಣ ‘ಮನ್ ಕೀ ಬಾತ್’ನಲ್ಲಿ ಅಭಿಪ್ರಾಯಪಟ್ಟರು. ಏಕ ಭಾರತ ಶ್ರೇಷ್ಠ ಭಾರತ ಪರಿಕಲ್ಪನೆಯ ಸಾಕಾರಕ್ಕೆ ಇದು ನೆರವಾಗುತ್ತದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶಪ್ರೇಮದ ಹಾಡುಗಳನ್ನು ನಾನಾ ಭಾಷೆಗಳಲ್ಲಿ ಜನಪ್ರಿಯಗೊಳಿಸಲು ಯುವಜನರು ಮುಂದಾಗಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಬಂದು 75 ವರ್ಷವಾದರೂ ದೇಶದಲ್ಲಿ ಅನೇಕ ಜನರು ತಮ್ಮ ಭಾಷೆ, ಉಡುಗೆ ತೊಡುಗೆ, ಆಹಾರ ಮತ್ತು ಪಾನೀಯಗಳ ಬಗ್ಗೆ ದ್ವಂದ್ವ ಹಾಗೂ ಸಂಕೋಚ ಧೋರಣೆ ಹೊಂದಿದ್ದಾರೆ. ಆದರೆ ಜಗತ್ತಿನ ಬೇರೆ ಯಾವುದೇ ಭಾಗದಲ್ಲಿ ಇಂಥ ಪರಿಸ್ಥಿತಿ ಇಲ್ಲ. ಜನರು ಹೆಮ್ಮೆಯಿಂದ ಮಾತೃ ಭಾಷೆಯಲ್ಲಿ ಮಾತನಾಡಬೇಕು. ಭಾಷಾ ಸಮೃದ್ಧಿ ವಿಚಾರದಲ್ಲಿ ಭಾರತಕ್ಕೆ ಸರಿಸಾಟಿಯಾದ ದೇಶ ಬೇರೊಂದಿಲ್ಲ ಎಂದು ಅವರು ಪ್ರತಿಪಾದಿಸಿದರು.

ತಾಂಜಾನಿಯಾ ಉದಾಹರಣೆ: ತಾಂಜಾನಿಯಾದ ಕಿಲಿ ಮತ್ತು ನಿಮಾ ಎನ್ನುವವರು ಭಾರತದ ಹಾಡುಗಳನ್ನು ಲಿಪ್ ಸಿಂಕ್ ಮಾಡುತ್ತಿದ್ದಾರೆ. ಭಾರತದಲ್ಲಿ ಕೂಡ ಹಲವು ಭಾಷೆಗಳಲ್ಲಿ ಅದೇ ರೀತಿ ಮಾಡಲು ಸಾಧ್ಯವಿಲ್ಲವೇಕೆ? ಗುಜರಾತಿ ಮಕ್ಕಳು ತಮಿಳು ಹಾಡನ್ನು ಹಾಡಲಾಗದೆ? ಕನ್ನಡದವರು ಜಮ್ಮು-ಕಾಶ್ಮೀರದ ಹಾಡುಗಳನ್ನು ಹಾಡಲು ಆಗುವುದಿಲ್ಲವೇ ಎಂದು ಪ್ರಧಾನಿ ಪ್ರಶ್ನಿಸಿದರು.

ವೋಕಲ್ ಫಾರ್ ಲೋಕಲ್​ಗೆ ಒತ್ತು: ಶಿವರಾತ್ರಿ, ಹೋಳಿಯಂಥ ಪ್ರಸಕ್ತ ಹಬ್ಬದ ಸಾಲಿನಲ್ಲಿ ಜನರು ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡುವ ‘ವೋಕಲ್ ಫಾರ್ ಲೋಕಲ್’ ಘೋಷಣೆಗೆ ಒತ್ತು ನೀಡಬೇಕು. ಜನರು ಸ್ಥಳೀಯ ಮಾರುಕಟ್ಟೆಗಳಿಂದಲೇ ಸಾಮಗ್ರಿಗಳನ್ನು ಖರೀದಿಸ ಬೇಕು. ಸಂಭ್ರಮ ವಿರಲಿ; ಜೊತೆಗೆ ಎಚ್ಚರಿಕೆಯೂ ಇರಲಿ ಎಂದು ಪ್ರಧಾನಿ ಹೇಳಿದರು.

ವಿಜ್ಞಾನಿಗಳಿಗೆ ನಮನ: ರಾಷ್ಟ್ರೀಯ ವಿಜ್ಞಾನ ದಿನದ ಮುನ್ನಾ ದಿನವಾದ ಭಾನುವಾರ ಪ್ರಧಾನಿ ಮೋದಿ ಸರ್ ಸಿ.ವಿ. ರಾಮನ್ ಮತ್ತು ಭಾರತದ ಇತರ ವಿಜ್ಞಾನಿಗಳಿಗೆ ಗೌರವ ಸಮರ್ಪಿಸಿದರು.

ಭಾರತದ ಅಮೂಲ್ಯ ವಿಗ್ರಹಗಳು ವಾಪಸ್: ಬಿಹಾರದಿಂದ ಕೆಲವು ವರ್ಷಗಳ ಹಿಂದೆ ಕಳವಾಗಿದ್ದ ಭಾರತೀಯ ವಿಗ್ರಹವೊಂದು ಇತ್ತೀಚೆಗೆ ಇಟಲಿಯಲ್ಲಿ ಪತ್ತೆಯಾಗಿ ಭಾರತಕ್ಕೆ ವಾಪಸ್ ಸಿಕ್ಕಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, ದೇಶದಿಂದ ಕಳ್ಳಸಾಗಾಟವಾಗಿದ್ದ ಅನೇಕ ಅಮೂಲ್ಯ ವಿಗ್ರಹಗಳು ತಮ್ಮ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಾಪಸ್ ಭಾರತದ ಮಡಿಲು ಸೇರುತ್ತಿವೆ. 2014ರವರೆಗೆ 13 ವಿಗ್ರಹಗಳು ಮಾತ್ರ ಭಾರತಕ್ಕೆ ವಾಪಸ್ ಬಂದಿದ್ದವು. ಆದರೆ ಕಳೆದ ಏಳು ವರ್ಷಗಳಲ್ಲಿ 200ಕ್ಕೂ ಅಧಿಕ ಅಮೂಲ್ಯ ವಿಗ್ರಹಗಳನ್ನು ಭಾರತ ವಾಪಸ್ ತಂದಿದೆ ಎಂದರು.

ತ್ರಿವಳಿ ತಲಾಕ್ ಇಳಿಕೆ: ದಿಢೀರ್ ತ್ರಿವಳಿ ತಲಾಕ್ ಒಂದು ಸಾಮಾಜಿಕ ಅನಿಷ್ಠ. ಅದನ್ನು ನಿಷೇಧಿಸುವ ಕಾನೂನನ್ನು 2019ರ ಸೆಪ್ಟೆಂಬರ್​ನಲ್ಲಿ ಅಂಗೀಕರಿಸಿದ ನಂತರ ತ್ರಿವಳಿ ತಲಾಕ್​ನಲ್ಲಿ ಶೇಕಡ 80 ಇಳಿಕೆ ದಾಖಲಾಗಿದೆ. ಇದು ಮಹಿಳೆಯರ ಸಬಲೀಕರಣದಲ್ಲಿ ಸರ್ಕಾರದ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಮಾನ ವಿವಾಹ ವಯಸ್ಸನ್ನು ನಿಗದಿಪಡಿಸುವ ಮೂಲಕ ಸ್ತ್ರೀ -ಪುರುಷರಿಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಲು ಪ್ರಯತ್ನಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net