ಒಂದ್ ಧಮ್ ಹೊಡೆಯೋಣ ಅಂದ್ರೆ ಆತನಿಗೆ ಸಿಗರೆಟ್ ಸಿಗಲಿಲ್ಲ..

France to spain 8 APR 20
Published on

ಪ್ಯಾರಿಸ್​: ಬಹುತೇಕ ಎಲ್ಲ ದೇಶಗಳಲ್ಲೂ ಈಗ ಕರೊನಾ ಲಾಕ್​ಡೌನ್ ಅವಧಿ. COVID19 ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ, ತೊಂದರೆಗೀಡಾಗಿರುವುದು ಮದ್ಯ, ಧೂಮಪಾನ ವ್ಯಸನಿಗಳು. ಕೆಲವರಂತೂ ಅತಿರೇಕದ ಕ್ರಮಕ್ಕೆ ಮುಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಘಟನೆ ಸ್ವಲ್ಪ ಭಿನ್ನವಾದುದು. ಈ ವ್ಯಕ್ತಿಗೆ ಪ್ರಾಣದ ಮೇಲೆ ಆಸೆ ಇದೆ. ಆದರೆ ಸಿಗರೆಟ್ ಇಲ್ಲದೆ ಬದುಕಲಾರ. ಸಿಗರೆಟ್ ಖರೀದಿಗಾಗಿ ಪಕ್ಕದ ದೇಶಕ್ಕೆ ಹೋಗಲು ಮುಂದಾಗಿದ್ದ! ಅದೂ ನಡೆದುಕೊಂಡೇ ಹೊರಟಿದ್ದ. ಸಿಗರೆಟ್ ಸಿಕ್ತಾ ಅಂತ ಕೇಳಿದ್ರೆ, ಆತನನ್ನು ರಕ್ಷಿಸುವುದಕ್ಕೆ ಹೆಲಿಕಾಪ್ಟರೇ ಬರಬೇಕಾಯಿತು! ಘಟನೆಯ ವಿವರ ಇಲ್ಲಿದೆ ಓದಿ..

ಈ ಘಟನೆಯ ಕೇಂದ್ರ ಬಿಂದು ಸಿಗರೆಟ್​ ವ್ಯಸನಿ. ಆದರೆ, ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ಫ್ರಾನ್ಸ್​ನಲ್ಲೂ ಲಾಕ್​ಡೌನ್ ಚಾಲ್ತಿಯಲ್ಲಿದೆ. ಎಲ್ಲಿಯೂ ಸಿಗರೆಟ್ ಸಿಗ್ತಾ ಇಲ್ಲ. ಅದಿಲ್ಲದೆ ಬದುಕುವುದು ಅಸಾಧ್ಯ ಎಂದು ಆತ ಒಂದು ನಿರ್ಧಾರಕ್ಕೆ ಬಂದ. ಗಡಿ ದಾಟಿ ಪಕ್ಕದ ದೇಶಕ್ಕೆ ಹೋಗಿ ಸಿಗರೆಟ್​ ತಂದೇ ಬಿಡುವುದು ಎಂಬುದಾಗಿತ್ತು ಆ ನಿರ್ಧಾರ. ಆತ ಇದ್ದದ್ದು ಫ್ರಾನ್ಸ್​ನ ಪರ್ಪಿಗ್ನಾನ್ ಎಂಬಲ್ಲಿ. ಅಲ್ಲಿಂದ ಪಕ್ಕದ ದೇಶ ಸ್ಪೇನ್​ನ ಲಾ ಜಾನ್​ಕ್ವೆರಾಕ್ಕೆ ಅಂದಾಜು 40 ಕಿ.ಮೀ. ಅಷ್ಟು ದೂರ ಹೋಗುವ ಲೆಕ್ಕಾಚಾರದ ಹಿಂದೆ ಇತ್ತೊಂದು ಕಾರಣ. ಅಲ್ಲಿ ಸಿಗರೆಟ್ ತುಂಬಾ ಅಗ್ಗ!

ಗಾಡಿ ತಗೊಂಡು ರಸ್ತೆಗೆ ಇಳಿದೇ ಬಿಟ್ಟ. ಡ್ರೈವ್ ಮಾಡ್ತಾ 20 ಮೈಲಿ ಹೋದವನಿಗೆ ಸಿಕ್ತೊಂದು ಚೆಕ್​ಪೋಸ್ಟ್​. ಅಲ್ಲಿ ಆತನ್ನನ್ನು ತಡೆದು ಹಿಂದಕ್ಕೆ ಕಳುಹಿಸಿದ್ರು. ಶನಿವಾರ ಈ ರೀತಿ ಹಿಂದೆ ಬಂದವನು ಮಾಡಿದ್ದೇನು ಗೊತ್ತೆ? ಇನ್ನೇನು ಮಾಡೋದು 40 ಕಿ.ಮೀ. ನಡೆದುಕೊಂಡೇ ಹೋಗಿ ಬರುವುದು. ಅಬ್ಬಬ್ಬಾ ಅಂದ್ರೆ ಅರ್ಧ ದಿನ ಬೇಕಾದೀತು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದ. ಪೊಲೀಸರ ಕಣ್ತಪ್ಪಿಸಿ ಬೆಟ್ಟ, ಕಂದಕಗಳಿರುವ ಮಾರ್ಗದ ಮೂಲಕ ಗಡಿ ದಾಟಿ ಹೋಗುವುದು ಎಂದು ಲೆಕ್ಕಾಚಾರ ಹಾಕಿ ನಡೆದೇ ಹೊರಟ.

ಪೈರೆನೀಸ್ ಬೆಟ್ಟಗಳ ನಡುವೆ ಮುಂದೆ ಹೋಗ್ತಾ ಹೋಗ್ತಾ ಆಯತಪ್ಪಿ ಕಂದಕಕ್ಕೆ ಜಾರಿಬಿದ್ದ. ಮುಂದೇನು ಎಂದು ತೋಚದೆ ಕೈಯಲ್ಲಿದ್ದ ಫೋನ್ ತಗೊಂಡು ಎಸ್​ಒಎಸ್ ಸಂದೇಶ ರವಾನಿಸಿದ. ಮೌಂಟೇನ್ ಪೊಲೀಸರು ಹೆಲಿಕಾಪ್ಟರ್ ತಗೊಂಡು ಅಲ್ಲಿಗೆ ಆಗಮಿಸಿದ್ರು. ಕಂದಕದಲ್ಲಿ ಇರುವ ಈ ವ್ಯಕ್ತಿಯನ್ನು ಗುರುತಿಸಿ ಮೇಲೆತ್ತಿದ್ರು. ಸೇಫ್ ಆಗಿ ಕರ್ಕೊಂಡು ಬಂದು ಪುನಃ ಊರಲ್ಲೇ ಬಿಟ್ರು. ಅಷ್ಟಕ್ಕೇ ಕಥೆ ಮುಗಿಯಲಿಲ್ಲ. ಲಾಕ್​ಡೌನ್ ನಿಯಮ ಉಲ್ಲಂಘಿಸಿ ಸಿಗರೆಟ್ ತರಲು ಹೋದುದಕ್ಕೆ 120 ಪೌಂಡ್ ದಂಡವನ್ನೂ ವಿಧಿಸಿದ್ರು.

ಅತ್ತ ಸಿಗರೆಟ್​ ಕೂಡ ಸಿಗಲಿಲ್ಲ. ಇತ್ತ ದಂಡ ಪಾವತಿಸುವುದೂ ತಪ್ಪಲಿಲ್ಲ ಎಂಬಂತಾಯಿತು ಆತನ ಪರಿಸ್ಥಿತಿ. ಸದ್ಯ ಫ್ರಾನ್ಸ್​ನಲ್ಲಿ ಪರಿಸ್ಥಿತಿ ಹೇಗಿದೆ ಅಂದ್ರೆ, 16,000ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಬಂದಿದೆ. 8,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸರಿಯಾದ ದಾಖಲೆಗಳಿಲ್ಲದೆ ಯಾರಾದರೂ ರಸ್ತೆಗೆ ಇಳಿದರೆ 50 ಪೌಂಡ್​ಗಿಂತಲೂ ಹೆಚ್ಚು ದಂಡ ವಿಧಿಸುವ ನಿಯಮ ಅಲ್ಲಿ ಸದ್ಯ ಚಾಲ್ತಿಯಲ್ಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net