ಎನ್​ಎಸ್​ಜಿ ಕಮಾಂಡೋ ಸೋಗಿನಲ್ಲಿ ಪ್ರಧಾನಿ ಕಾರ್ಯಕ್ರಮದ ವಿವಿಐಪಿ ವಿಭಾಗಕ್ಕೆ ಒಳನುಸುಳಲು ಬಂದವ ಅಂದರ್!

Modi Rally
Published on

ಮಹಾರಾಷ್ಟ್ರ: ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (National Security Guard (NSG)) ಸೋಗಿನಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ರ‍್ಯಾಲಿಯ ವಿವಿಐಪಿ ವಿಭಾಗಕ್ಕೆ ಒಳನುಸುಳಲು ಯತ್ನಿಸಿದ್ದಾನೆ. ಸದ್ಯ ಈತನನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಬಳಿ ಪೊಲೀಸರು ಬಂಧಿಸಿದ್ದಾರೆ. ರಾಮೇಶ್ವರ್​ ಮಿಶ್ರಾ ಬಂಧಿತ ವ್ಯಕ್ತಿ ಎಂದು ವರದಿಯಾಗಿದೆ.

ಬಂಧಿತ ರಾಮೇಶ್ವರ್ ಮಿಶ್ರಾ ಎನ್​ಎಸ್​ಜಿ ಕಮಾಂಡೋ ಎಂದು ನಕಲಿ ಗುರುತಿನ ಚೀಟಿ ಬಳಸಿ ವಿವಿಐಪಿ ವಿಭಾಗಕ್ಕೆ ಪ್ರವೇಶಿಸಲು ಯತ್ನಿಸಿದ್ದ. ತಾನು ಭಾರತೀಯ ಸೇನೆಯ ಗಾರ್ಡ್ಸ್ ರೆಜಿಮೆಂಟ್‌ನ ಸೈನಿಕ ಎಂದು ಹೇಳಿಕೊಂಡಿದ್ದಾನೆ. ಈ ವೇಳೆ ಅನುಮಾನ ಬಂದ ಪೊಲೀಸರು ತಡೆದಿದ್ದಾರೆ. ಈ ವೇಳೆ ನಕಲಿ ಕಾರ್ಡ್ ಬಳಸಿ ಒಳಬರಲು ಯತ್ನಿಸುತ್ತಿರುವುದು ಗೊತ್ತಾಗುತ್ತಿದ್ದಂತೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ಮೈದಾನದ ಪ್ರವೇಶ ದ್ವಾರದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯ ತಂಡ ಮಿಶ್ರಾ ಅವರನ್ನು ಬಂಧಿಸಿದೆ.

ಪ್ರಧಾನಿ ನರೇಂದ್ರ ಮೋದಿ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ತಲುಪುವ 90 ನಿಮಿಷಗಳ ಮೊದಲು ರಾಮೇಶ್ವರ್​ ಮಿಶ್ರಾನ ಬಂಧನವಾಗಿದೆ. ಬಂಧಿತ ಮಿಶ್ರಾ ವಿರುದ್ಧ 171, 465, 468 ಮತ್ತು 471 ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಕೆಸಿ ಪೊಲೀಸರು, ಭಾರತೀಯ ಸೇನೆ, ಇಂಟಲಿಜೆನ್ಸ್ ಬ್ಯೂರೋ ಹಾಗೂ ಪ್ರಧಾನ ಮಂತ್ರಗಳ ಭದ್ರತಾ ಕಚೇರಿಯ ವಿವಿಧ ಏಜೆನ್ಸಿಗಳು ರಾಮೇಶ್ವರ್ ಮಿಶ್ರಾನನ್ನು ವಿಚಾರಣೆಗೆ ಒಳಪಡಿಸಿವೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಜ.24ರ ವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net