ಗರ್ಭಿಣಿ ಹೆಂಡತಿಗಾಗಿ ಆಕ್ಸಿಜನ್​ ಸಿಲಿಂಡರ್​ ಇದ್ದ ಆ್ಯಂಬುಲೆನ್ಸ್​ನ್ನೇ ಹೈಜಾಕ್ ಮಾಡಿದ ಗಂಡ!

hijack
Published on

ಭೋಪಾಲ್​: ಪ್ರೀತಿ ಪಾತ್ರರಿಗಾಗಿ ಏನಾದರೂ ಮಾಡುವುದಕ್ಕೆ ರೆಡಿ ಇರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನ ಗರ್ಭಿಣಿ ಹೆಂಡತಿಗಾಗಿ ಆಕ್ಸಿಜನ್ ಸಿಲಿಂಡರ್ ಇದ್ದ ಆ್ಯಂಬುಲೆನ್ಸ್​ ಅನ್ನೇ ಹೈಜಾಕ್ ಮಾಡಿದ್ದಾನೆ.

ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆ ವ್ಯಕ್ತಿಯ ಹೆಂಡತಿ ಗರ್ಭಿಣಿಯಾಗಿದ್ದು, ನಾಲ್ಕು ದಿನಗಳ ಹಿಂದೆ ಆಕೆಗೆ ಕರೊನಾ ಸೋಂಕು ದೃಢವಾಗಿದೆ. ಶುಕ್ರವಾರ ರಾತ್ರಿಯಿಂದ ಆಕೆಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತ ಆ್ಯಂಬುಲೆನ್ಸ್​ಗೆ ಕರೆ ಮಾಡಿ ನನ್ನ ಹೆಂಡತಿಯನ್ನು ದಾಖಲಿಸಿಕೊಳ್ಳಿ ಎಂದು ಮನವಿ ಮಾಡಿದ್ದಾನೆ. ಆದರೆ ರಾತ್ರಿ ಆ್ಯಂಬುಲೆನ್ಸ್ ಬಂದಿಲ್ಲ. ಶನಿವಾರ ಬೆಳಗ್ಗೆ 9.30ರ ಸಮಯಕ್ಕೆ ಆ್ಯಂಬುಲೆನ್ಸ್ ಬಂದಿದೆ.

ಆ್ಯಂಬುಲೆನ್ಸ್​ನಲ್ಲಿ ಆಕ್ಸಿಜನ್ ಸಿಲಿಂಡರ್​ ಇರುವುದನ್ನು ಕಂಡ ಪತಿ, ಅದರ ಡ್ರೈವರ್​ನ್ನು ಕೆಳಗಿಳಿಸಿ, ಗಾಡಿಯೊಳಗೆ ಸೇರಿಕೊಂಡಿದ್ದಾನೆ. ಮನೆಯಿಂದ ಸ್ವಲ್ಪ ದೂರ ಹೋಗಿ ಅಲ್ಲಿಯೇ ಗಾಡಿ ನಿಲ್ಲಿಸಿಕೊಂಡಿದ್ದಾನೆ. ಆ್ಯಂಬುಲೆನ್ಸ್ ಡ್ರೈವರ್ ಈ ವಿಚಾರವಾಗಿ ಮೇಲಿನ ಅಧಿಕಾರಿಗೆ ಮಾಹಿತಿ ನೀಡಿದ್ದಾನೆ. ಅದಾದ ನಂತರ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಪೊಲೀಸರು ಆತನನ್ನು ಹುಡುಕಿದ್ದಾರೆ. ಸತತ ಎರಡು ಗಂಟೆಗಳ ಕಾಲ ಮನವೊಲಿಸುವ ಪ್ರಯತ್ನ ಮಾಡಿ ನಂತರ ಆತನ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net