ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಕೃತ್ಯದ ಕುರಿತು ಪೊಲೀಸರು ಕೊಟ್ಟ ಮಾಹಿತಿ ಹೀಗಿದೆ | Sexual Harassment

Untitled design - 2025-04-06T155516.670
Published on

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ(Sexual Harassment) ನಡೆಸಿ ಗರ್ಭಿಣಿಯಾದ ಪ್ರಕರಣ ಬೆಳಕಿಗೆ ಬಂದಿದೆ. ಈ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದು, ಆ ಹುಡುಗಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದರು.

ಕೃತ್ಯ ಎಸಗಿದ 29 ವರ್ಷದ ಆರೋಪಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಯು ಬಿಹಾರದಲ್ಲಿರುವ ಬಾಲಕಿಯ ಕುಟುಂಬದಂತೆಯೇ ಅದೇ ಗ್ರಾಮದವನಾಗಿದ್ದು, ಎರಡು ತಿಂಗಳ ಹಿಂದೆ ಬದ್ಲಾಪುರದಲ್ಲಿ ಅವರಿಗೆ ಬಾಡಿಗೆ ಮನೆ ವ್ಯವಸ್ಥೆ ಮಾಡಿ ಮತ್ತು ಆಕೆಯ ಚಿಕಿತ್ಸೆಗೆ ಸಹಾಯ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಆರೋಪಿಯು ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಆಕೆಯ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಮುಂಬೈನ ಆಸ್ಪತ್ರೆಯಲ್ಲಿ ಬಾಲಕಿ ಕಿಮೊಥೆರಪಿಗೆ ಒಳಗಾಗುತ್ತಿದ್ದಳು ಮತ್ತು ನಿಯಮಿತ ತಪಾಸಣೆಯ ಸಮಯದಲ್ಲಿ ಅವಳು ಗರ್ಭಿಣಿಯಾಗಿದ್ದಾಳೆಂದು ತಿಳಿದುಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಶೈಲೇಶ್ ಕಾಳೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ಮತ್ತೊಂದು ಘಟನೆಯಲ್ಲಿ ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯೊಬ್ಬನನ್ನು ನಾಸಿಕ್‌ನ ಹೋಟೆಲ್‌ನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. ಫೆಬ್ರವರಿ 16 ರಿಂದ ಮಾರ್ಚ್ 29ರವರೆಗೆ ಡೊಂಬಿವಿಲಿಯ ದಾವಡಿ ಪ್ರದೇಶದಲ್ಲಿ ಆರೋಪಿಯು ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು 19 ವರ್ಷದ ದೂರುದಾರೆ ಆರೋಪಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ) ಅಮರಸಿಂಗ್ ಜಾಧವ್ ತಿಳಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net