ವಾಕಿಂಗ್ ಹೋಗುತ್ತಿದ್ದವನಿಗೆ ಬಿತ್ತು 300 ರೂ. ದಂಡ! ಹೆಲ್ಮೆಟ್​ ಹಾಕಿಲ್ಲ ಎಂದು ಫೈನ್ ಹಾಕಿ, ಠಾಣೆಯಿಂದ ಕಳಿಸಿದ ಖಾಕಿ​ | Helmet

ವಿಜಯವಾಣಿ (77)
Published on

Helmet: ದ್ವಿಚಕ್ರ ವಾಹನವನ್ನು ಓಡಿಸದೆ ತನ್ನ ಪಾಡಿಗೆ ತಾನು ಸುಮ್ಮನೆ ಮನೆಯ ದಾರಿಯಲ್ಲಿ ಹೋಗುತ್ತಿದ್ದವನಿಗೆ 300 ರೂ. ದಂಡ ವಿಧಿಸಿದ ಪೊಲೀಸರ ವಿರುದ್ಧ ವ್ಯಕ್ತಿಯೊಬ್ಬ ತೀವ್ರ ಅಸಮಾಧಾನ ಹೊರಹಾಕಿದ್ದು, ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ಸಂಪರ್ಕಿಸಿ, ತನಗೆ ದಂಡ ಹಾಕಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ವರದಿಯಾಗಿದೆ.

ಪನ್ನಾ ಜಿಲ್ಲೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಅಜಯ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸುಶೀಲ್ ಕುಮಾರ್ ಶುಕ್ಲಾ ಎಂಬ ವ್ಯಕ್ತಿ ನೀಡಿದ ಹೇಳಿಕೆ ಪ್ರಕಾರ, ತನ್ನ ಮಗಳ ಹುಟ್ಟುಹಬ್ಬಕ್ಕೆ ಅತಿಥಿಗಳನ್ನು ಆಹ್ವಾನಿಸಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪೊಲೀಸ್ ವಾಹನವೊಂದು ತನ್ನನ್ನು ದಿಢೀರ್​ ಅಡ್ಡಗಟ್ಟಿತು. ನನ್ನ ಬಲವಂತವಾಗಿ ಪೊಲೀಸ್ ವಾಹನಕ್ಕೆ ಕೂರಿಸಿ ಅಜಯ್‌ಗಢ ಪೊಲೀಸ್ ಠಾಣೆಗೆ ಕರೆದೊಯ್ದು, ಅಲ್ಲಿ ಸ್ವಲ್ಪ ಸಮಯದವರೆಗೆ ನನ್ನನ್ನು ಬಂಧನದಲ್ಲಿಡಲಾಯಿತು" ಎಂದು ಆರೋಪಿಸಿದ್ದಾರೆ.

ತನ್ನ ಮಗಳ ಹುಟ್ಟುಹಬ್ಬಕ್ಕಾಗಿ ನಾನು ಈಗಲೇ ಮನೆಗೆ ವಾಪಾಸ್​ ಹೋಗಬೇಕು ಎಂದು ಪೊಲೀಸರ ಬಳಿ ಅಳಲು ತೋಡಿಕೊಂಡ ಬಳಿಕ ಅಧಿಕಾರಿಗಳು ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್​ನ ನೋಂದಣಿ ಸಂಖ್ಯೆಯನ್ನು ಬರೆದಿಟ್ಟು, ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ದಂಡ ವಿಧಿಸಿ, ಆನಂತರ ನನ್ನನ್ನು ಹೊರಬಿಟ್ಟರು ಎಂದು ಶುಕ್ಲಾ ಹೇಳಿದ್ದಾರೆ. ಈ ಘಟನೆಯಿಂದ ನೊಂದ ವ್ಯಕ್ತಿ, ಪನ್ನಾಗೆ ತೆರಳಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಲಿನ ಎಸ್‌ಪಿಗೆ ದೂರು ಸಲ್ಲಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net