ಕರೊನಾ ಗುಣವಾದರೂ ಕೀಳಾಗಿ ಕಂಡರು; ಬೇಸತ್ತು ಆತ್ಮಹತ್ಯೆ ಮಾಡಿಕೊಂಡ

ratnakar
Published on

ಕಾರವಾರ: ಕೋವಿಡ್​-19 ಸೋಂಕಿಗೆ ತುತ್ತಾಗಿ, ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣವಾದರೂ ಜನರು ಆ ವ್ಯಕ್ತಿಗಳನ್ನು ಕೀಳಾಗಿ ಕಾಣುವುದನ್ನು ನಿಲ್ಲಿಸುತ್ತಿಲ್ಲ. ಸೋಂಕಿಗೆ ತುತ್ತಾದ ಸಂದರ್ಭದಲ್ಲೇ ಸೋಂಕಿತರನ್ನು ಕೀಳಾಗಿ ಕಾಣಲಾಗುತ್ತದೆ. ಇದು ಸೇರಿ, ತನ್ನಿಂದಾಗಿ ಬೇರೆಯವರಿಗೆ ತೊಂದರೆ ಆಯಿತಲ್ಲ ಎಂದು ಮಾನಸಿಕವಾಗಿ ಕುಗ್ಗಿರುತ್ತಾರೆ. ಗುಣವಾಗಿ ಬಂದ ನಂತರದಲ್ಲೂ ಇದೇ ರೀತಿಯ ವರ್ತನೆ ತೋರುವುದರಿಂದ ಮಾನಸಿಕವಾಗಿ ಮತ್ತಷ್ಟು ಘಾಸಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತ ಸಾಧ್ಯತೆ ಇರುತ್ತದೆ.

ಕಾರವಾರದಲ್ಲಿ ಕೂಡ ಇದೇ ರೀತಿ ಆಗಿದ್ದು, ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿರವಾಡ ನಿವಾಸಿ ರತ್ನಾಕರ ನಾಯ್ಕ (42) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.

ಒಂದು ತಿಂಗಳ ಹಿಂದೆ ರತ್ನಾಕರ ನಾಯ್ಕ ಕೋವಿಡ್​-19 ಸೋಂಕಿಗೆ ತುತ್ತಾಗಿದ್ದರು. ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ಮರಳಿದ್ದರು. ಆದರೂ ಮನೆಯವರು ಸೇರಿ, ಅಕ್ಕಪಕ್ಕದವರು ಯಾರು ಕೂಡ ಇವರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಅವರು ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರವಾರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net