ಕಣ್ಣೂರಿನಲ್ಲಿ ಬಾಂಬ್​ ಸ್ಫೋಟ; ಓರ್ವ ಮೃತ್ಯು, ಇನ್ನೋರ್ವ ಗಂಭೀರ

Kerala Blast
Published on

ಕಣ್ಣೂರು: ಬಾಂಬ್​ ತಯಾರಿಸುವ ವೇಳೆ ಅದು ಸ್ಫೋಟಗೊಂಡ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಪಾನೂರು ಬಳಿ ನಡೆದಿದೆ.

ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮೃತಪಟ್ಟಿದ್ದಾನೆ. ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಣ್ಣೂರು ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೃತನನ್ನು ಶೆರಿನ್​ (26) ಎಂದು ಗುರುತಿಸಲಾಗಿದ್ದು, ಈತ ಸ್ಥಳೀಯ ಸಿಪಿಎಂ ಕಾರ್ಯಕರ್ತ ಎಂದು ತಿಳಿದು ಬಂದಿದ್ದು, ವಿನೀಶ್​ (24) ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ. ಮನೆ ಒಂದರ ಟೆರೇಸ್​ ಮೇಲೆ ಬಾಂಬ್​ ತಯಾರಿಸುವ ವೇಳೆ ದುರ್ಘಟನೆ ಸಂಭವಿಸಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಣ್ಣೂರು ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತ ಬಾಂಬ್​ ಬ್ಲಾಸ್ಟ್​ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಲೋಕಸಭೆ ಚುನಾವಣೆಯನ್ನು ಹಾಳು ಮಾಡಲು ಸಿಪಿಎಂ ಮುಂದಾಗಿದ್ದು, ಇದಕ್ಕೆ ಸ್ಪಷ್ಟವಾದ ನಿದರ್ಶನ ದೊರೆತಿದೆ. ಪೊಲೀಸರಿಗೆ ಈ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದರೂ ಸಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹಿರಿಯ ಸಿಪಿಎಂ ನಾಯಕರ ಮಾರ್ಗದರ್ಶನದಲ್ಲಿ ಬಾಂಬ್​ಗಳನ್ನು ತಯಾರಿಸಲಾಗಿದ್ದು, ಈ ಬಗ್ಗೆ ವಿಸ್ತೃತ ತನಿಖೆ ಆಗಬೇಕು ಎಂದು ಕಾಂಗ್ರೆಸ್​ ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net