

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು(ಕೆಎಸ್‌ಆರ್) ನಿಲ್ದಾಣದಲ್ಲಿ ಚಲಿಸುವ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆೆ.
ಪಶ್ಚಿಮ ಬಂಗಾಳ ಮೂಲದ ಸುಶಾಂತ್(೪೦) ಮೃತ ದುರ್ದೈವಿ. ಗುರುವಾರ ಮಧ್ಯಾಹ್ನ ಸುಮಾರು ೩.೨೦ಕ್ಕೆ ಕೆಎಸ್‌ಆರ್ ರೈಲು ನಿಲ್ದಾಣದ ೮ನೇ ಅಂಕಣದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಶ್ಚಿಮ ಬಂಗಾಳದಲ್ಲಿರುವ ಮೃತನ ಕುಟುಂಬಕ್ಕೆ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಸುಶಾಂತ್ ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ ಕೆಎಸ್‌ಆರ್ ರೈಲು ನಿಲ್ದಾಣದ ೮ನೇ ಅಂಕಣಕ್ಕೆ ಬಂದಿದ್ದರು. ಇದೇ ಸಮಯಕ್ಕೆ ಬೆಂಗಳೂರಿನಿಂದ ಮೈಸೂರು ಕಡೆಗೆ ಒಡೆಯರ್ ಎಕ್ಸ್‌ಪ್ರೆಸ್ ರೈಲು ಹೊರಟ್ಟಿದೆ. ಈ ವೇಳೆ ಏಕಾಏಕಿ ರೈಲಿನತ್ತ ಓಡಿ ಬಂದಿರುವ ಸುಶಾಂತ್, ಹಳಿಗೆ ಅಡ್ಡಲಾಗಿ ಮಲಗಿದ್ದಾನೆ. ಈ ವೇಳೆ ರೈಲು ಚಕ್ರ ಆತನ ಕುತ್ತಿಗೆ ಮೇಲೆ ಹರಿದ ಪರಿಣಾಮ ರುಂಡ ಮತ್ತು ಮುಂಡ ಬೇರ್ಪಟ್ಟು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಕೆಎಸ್‌ಆರ್ ರೈಲು ನಿಲ್ದಾಣದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಮೃತನ ಕುಟುಂಬದವರು ಬಂದ ಬಳಿಕ ಮರಣೋತ್ತರ ಪರೀಕ್ಷೆ ಮಾಡಿಸಿ, ಮೃತದೇಹ ಹಸ್ತಾಂತರಿಸಲಾಗುವುದು. ಈ ಸಂಬಂದ ಕೆಎಸ್‌ಆರ್ ರೈಲು ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.