ಸಿಕ್ಕಸಿಕ್ಕ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ರೌಡಿ ಒಂದೇ ಮನೆಯ 8 ಜನರಿಂದ ಬರ್ಬರವಾಗಿ ಹತ್ಯೆಯಾದ...

Mob
Published on

ಕೋಟಾ: 30 ವರ್ಷದ ವ್ಯಕ್ತಿಯೋರ್ವನನ್ನು 8 ಜನ ಸೇರಿ ಹೊಡೆದು, ಕೊಂದಿದ್ದಾರೆ.

ಮಹಿಳೆಯನ್ನು ಚುಡಾಯಿಸಿದ್ದಾನೆ, ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ ಆಕೆಯ ಕುಟುಂಬದವರೇ ಸೇರಿ ಈ ಕೃತ್ಯ ಎಸಗಿದ್ದಾರೆ. ಕೋಲು, ಕಬ್ಬಿಣದ ರಾಡ್​ಗಳಿಂದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಅವನತ್ತ ಕಲ್ಲು ಕೂಡ ಎಸೆದಿದ್ದಾರೆ. ತೀವ್ರವಾದ ಗಾಯಗೊಂಡ ಆತ ಮೃತಪಟ್ಟಿದ್ದಾನೆ.

ಮಹಿಳೆಯನ್ನೂ ಸೇರಿ 9 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಂಟು ಜನರನ್ನು ಬಂಧಿಸಿದ್ದಾರೆ.

ರಾಜಸ್ಥಾನದ ಕೋಟಾದ ಸುಮರ್​ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ದುರ್ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ರಾಜು ಬಾಗ್ರಿ ಎಂದು ಗುರುತಿಸಲಾಗಿದೆ.

ಈತ ಬಹುದೊಡ್ಡ ಕ್ರಿಮಿನಲ್​ ಆಗಿದ್ದ. ಹಲವು ಅಪರಾಧಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ. ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ. ಅಂತೆಯೇ 22 ವರ್ಷದ ವಿವಾಹಿತ ಯುವತಿಗೂ ಕಳೆದ ವಾರ ಕಿರುಕುಳ ಕೊಟ್ಟಿದ್ದ. ಇದರಿಂದ ಕೋಪಗೊಂಡ ಆಕೆಯ ಕುಟುಂಬದವರು ರೊಚ್ಚಿಗೆದ್ದು ಹೊಡೆದಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಪೊಲಿಸರು ಹೇಳಿದ್ದಾರೆ. ಇದನ್ನೂ ಓದಿ: 25ನೇ ವರ್ಷದ ಬರ್ತ್​ ಡೇಗೆ 25 ಕೇಕ್​ಗಳನ್ನು ಕಟ್​ ಮಾಡಿದವನ ಬಂಧನ…!

ಮೃತದೇಹವನ್ನು ಅವನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಬಾಗ್ರಿ ಕುಟುಂಬದವರೂ ಸಹ ಮಹಿಳೆಯ ಮನೆಯ ಸದಸ್ಯರ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net