ನಿರ್ಜನ ರಸ್ತೆಯಲ್ಲಿ ಮಹಿಳೆಯರ ಮೇಲೆರಗುತ್ತಿದ್ದ 'ಸೀರಿಯಲ್ ರೇಪಿಸ್ಟ್' ಬಂಧನ

arrest
Published on

ನಾಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನಾಯ್ಡಾದಲ್ಲಿ ಜನಸಂಚಾರವಿಲ್ಲದ ರಸ್ತೆಗಳಲ್ಲಿ ಪೊದೆಯಲ್ಲಿ ಬಚ್ಚಿಟ್ಟುಕೊಂಡು ಮಹಿಳೆಯರ ಮೇಲೆರಗಿ ಅತ್ಯಾಚಾರ ನಡೆಸುತ್ತಿದ್ದ 'ಸೀರಿಯಲ್ ರೇಪಿಸ್ಟ್​' ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಕೇಸಿನಲ್ಲೇ ಜಾಮೀನಿನ ಮೇಲೆ ಹೊರಬಂದಿದ್ದ ಈ ಆರೋಪಿ, ಮತ್ತೆ ನಾಲ್ಕು ಅತ್ಯಾಚಾರವೆಸಗಿ, ಕೊನೆಗೂ ಪೊಲೀಸರ ವಶವಾಗಿದ್ದಾನೆ.

ಫೆಬ್ರವರಿ 25 ರಂದು ಗ್ರೇಟರ್ ನಾಯ್ಡಾದ ಸೂರಜ್​ಪುರ್ ಪೊಲೀಸ್ ಠಾಣೆಗೆ ಅತ್ಯಾಚಾರದ ದೂರೊಂದು ಬಂತು. ಅದರ ತನಿಖೆ ಆರಂಭಿಸಿದಾಗ, 2019ರಲ್ಲಿ ಅತ್ಯಾಚಾರದ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಒಬ್ಬಾತನ ಕಡೆಗೆ ಸಾಕ್ಷ್ಯಗಳು ಬೆಟ್ಟು ಮಾಡಿದವು. ಈತ ಮುಂಚಿನ ಪ್ರಕರಣದಲ್ಲಿ ಬಂಧಿತನಾಗಿದ್ದು, ಇದೇ ತಿಂಗಳ ಮೊದಲಿನಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಹೊರಬಂದು ಮತ್ತೆ ಕೆಲವೇ ದಿನಗಳಲ್ಲಿ ನಾಲ್ಕು ಅತ್ಯಚಾರಗಳನ್ನು ಎಸಗಿದ ಎಂಬುದು ತಿಳಿದುಬಂತು ಎನ್ನಲಾಗಿದೆ.

ಈ ಆರೋಪಿಯನ್ನು ನಾಲ್ಕ ದಿನಗಳವರೆಗೆ ಪೊಲೀಸರ ವಿವಿಧ ತಂಡಗಳು ಹುಡುಕಿದ್ದು, ಆತನ ಮೂಲ ಸ್ಥಳವಾದ ಹಮೀರ್​ಪುರಕ್ಕೆ ಕೂಡ ತನಿಖಾ ತಂಡ ಭೇಟಿ ನೀಡಿತ್ತು. ಸೋಮವಾರ ರಾತ್ರಿ 10 ಗಂಟೆಗೆ ಗ್ರೇಟರ್ ನಾಯ್ಡಾ ಪ್ರಾಧಿಕಾರದ ಕಛೇರಿ ಬಳಿ ಇರುವ ಸುಳಿವು ಬಂತು. ಬಂಧಿಸಲು ಹೋದ ಪೊಲೀಸರ ಮೇಲೆ ಆತ ಕಂಟ್ರಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರಿಂದ ಪೊಲೀಸರೂ ಆತನ ಮೇಲೆ ಗುಂಡು ಹಾರಿಸಿದರು. ಕೊನೆಗೆ ಆರೋಪಿಯ ಕಾಲಿಗೆ ಗುಂಡು ಬಿದ್ದ ಮೇಲೆ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಾಯ್ಡಾದ ಮಹಿಳಾ ಸುರಕ್ಷೆ ವಿಭಾಗದ ಡಿಸಿಪಿ ವೃಂದಾ ಶುಕ್ಲ ತಿಳಿಸಿದ್ದಾರೆ.

ಈತನ ಅಪರಾಧ ಎಸಗುವ ವಿಧಾನವು ಮುಂಚಿನ ಪ್ರಕರಣದಂತೆಯೇ ಇತ್ತು. ನಿರ್ಜನ ಪ್ರದೇಶಗಳಲ್ಲಿರುವ ರಸ್ತೆಗಳಲ್ಲಿ ಪೊದೆಯಲ್ಲಿ ಬಚ್ಚಿಟ್ಟುಕೊಂಡು, ಆ ಕಡೆ ಸುಳಿಯುವ ಒಂಟಿ ಮಹಿಳೆಯರನ್ನು ಅತ್ಯಾಚಾರಕ್ಕೆ ಟಾರ್ಗೆಟ್​ ಮಾಡುತ್ತಿದ್ದ ಎನ್ನಲಾಗಿದೆ. ಅತ್ಯಾಚಾರದೊಂದಿಗೆ, ಹಲವು ಲೂಟಿ ಮತ್ತು ಕಳವು ಪ್ರಕರಣಗಳು ದರ್ಜಾಗಿದ್ದು, ಆರೋಪಿಗೆ ಶೀಘ್ರವಾಗಿ ಶಿಕ್ಷೆಯಾಗುವಂತೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಪೊಲೀಸ್ ಬಂದೋಬಸ್ತಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net