1997ರಲ್ಲಿ ಕೇವಲ 60 ರೂ.ಗಾಗಿ ಕಳ್ಳತನ; 27 ವರ್ಷಗಳ ಬಳಿಕ ಆರೋಪಿ ಅರೆಸ್ಟ್​! ಏನಿದು ಪ್ರಕರಣ?

thief
Published on

ತಮಿಳುನಾಡು: ಕಳೆದ 27 ವರ್ಷಗಳಿಂದ ಕಳ್ಳತನದ ಆರೋಪದಡಿ ಖಾಕಿ ಪಡೆಯಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇದೀಗ ವಿಶೇಷ ಪೊಲೀಸರ ತಂಡ ಕಡೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. 60 ರೂಪಾಯಿ ಹಣ ಲಪಟಾಯಿಸಿದ್ದ ವ್ಯಕ್ತಿಯನ್ನು ಪನ್ನೀರ್ ಸೆಲ್ವಂ ಎಂದು ಗುರುತಿಸಲಾಗಿದ್ದು, ಶಿವಕಾಶಿಯಲ್ಲಿ ಸಿಕ್ಕಿಬಿದ್ದಿರುವುದಾಗಿ ವರದಿಯಾಗಿದೆ.

27 ವರ್ಷಗಳ ಹಿಂದೆ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಶಿವಕಾಶಿಯ 55 ವರ್ಷದ ವ್ಯಕ್ತಿಯನ್ನು ಇದೀಗ ಮಧುರೈ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. 1997ರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಸೆಲ್ವಂ, 60 ರೂ. ಹಣವನ್ನು ಕಳ್ಳತನ ಮಾಡಿದ್ದು, ಸ್ಥಳದಿಂದ ಪರಾರಿಯಾಗಿದ್ದರು. ಈ ಕೇಸ್​ನಲ್ಲಿ ಪೊಲೀಸರ ಕಣ್ತಪ್ಪಿಸಿ, ತಲೆಮರಿಸಿಕೊಂಡಿದ್ದ ಸೆಲ್ವಂನನ್ನು ಪೊಲೀಸರು ಶಿವಕಾಶಿಯಲ್ಲಿ ಅರೆಸ್ಟ್ ಮಾಡಿದ್ದಾರೆ.

ತೆಪ್ಪಕುಳಂ ಪೊಲೀಸ್ ಠಾಣೆಯಲ್ಲಿ ದರೋಡೆ

ಬಹುಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳ ಪತ್ತೆಗೆ ಸಹಾಯಕ ಆಯುಕ್ತ ಸೂರಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ವಿಶೇಷ ಸಬ್ ಇನ್ಸ್​ಪೆಕ್ಟರ್​ಗಳಾದ ಸಂತಾನಪಾಂಡಿಯನ್ ನೇತೃತ್ವದ ತಂಡ, ತಲೆಮರೆಸಿಕೊಂಡಿರುವ ಶಂಕಿತರ ಮೇಲೆ ಬಲೆ ಬೀಸಿತ್ತು. ಈ ಪ್ರಕರಣಗಳಲ್ಲಿ ಒಂದಾದ ತೆಪ್ಪಕುಳಂ ಪೊಲೀಸ್ ಠಾಣೆಯಲ್ಲಿ ದರೋಡೆ ನಡೆದಿದ್ದು, ಆರೋಪಿ ಪನ್ನೀರ್ ಸೆಲ್ವಂ ಸಂತ್ರಸ್ತೆಯಿಂದ 60 ರೂ.ಗಳನ್ನು ಕದ್ದು ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಗುರುತು ದೃಢ

ತನಿಖಾಧಿಕಾರಿಗಳು ಜಕ್ಕತೊಪ್ಪಿಗೆ ಭೇಟಿ ನೀಡಿದಾಗ ಪನ್ನೀರ್ ಸೆಲ್ವಂ, ಶಿವಕಾಶಿಗೆ ತೆರಳಿರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಆತ ತನ್ನ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು ಗಮನಿಸಿದ್ದಾರೆ. ಜನಸಂಖ್ಯಾ ಸಮೀಕ್ಷಕರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ತಂಡ, ಆತನ ಕುಟುಂಬದವರನ್ನು ಸಂಪರ್ಕಿಸಿ, ಸೆಲ್ವಂ ಗುರುತನ್ನು ದೃಢಪಡಿಸಿಕೊಂಡಿದೆ. ಆ ವ್ಯಕ್ತಿ ಈತನೇ ಎಂಬುದು ದೃಢವಾದ ಬೆನ್ನಲ್ಲೇ ಅಪರಾಧ ನಡೆದು 27 ವರ್ಷಗಳ ನಂತರ ಈಗ ಸೆಲ್ವಂನನ್ನು ಖಾಕಿ ಪಡೆ ಬಂಧಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net