ಆಟೋದಲ್ಲಿ ಬೀದಿ ನಾಯಿ ಎಳೆದೊಯ್ದ ವ್ಯಕ್ತಿ ಸೆರೆ

street dog
ರಿಪ್ಪನ್‌ಪೇಟೆಯಲ್ಲಿ ಬೀದಿ ನಾಯಿಯನ್ನು ಲಗೇಜ್ ಆಟೋಗೆ ಕಟ್ಟಿ ಎಳೆದೊಯ್ದಿರುವುದು.
Published on

ಶಿವಮೊಗ್ಗ: ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದಲ್ಲಿ ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಎಳೆದೊಯ್ದ ಸುದ್ದಿ ಸಾಮಾಜಿಕ ತಾಣದಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪರಿಣಾಮ ನಾಯಿಯನ್ನು ಲಗೇಜ್ ಆಟೋಕ್ಕೆ ಕಟ್ಟಿ ಎಳೆದೊಯ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆಂಚನಾಲ ಗ್ರಾಮದ ಆಟೋ ಚಾಲಕ ವಾಜೀದ್ ಬಂಧಿತ. ಕೆಂಚನಾಲ ರೈಲ್ವೆ ನಿಲ್ದಾಣದ ಬಳಿಯಲ್ಲಿ ಬೀದಿ ನಾಯಿಯನ್ನು ಅಮಾನುಷವಾಗಿ ಹೊಡೆದು ಸಾಯಿಸಿ ಆಟೋದಲ್ಲಿ ಎಳೆದುಕೊಂಡು ಹೋದ ಆರೋಪದಡಿ ಎಫ್‌ಐಆರ್ ದಾಖಲಿಸಿ ಆತನನ್ನು ಬಂಧಿಸಲಾಗಿದೆ.

ಕೆಂಚನಾಲ ರೈಲ್ವೆ ನಿಲ್ದಾಣದ ಬಳಿಯಲ್ಲಿ ಅದರಷ್ಟಕ್ಕೆ ಮಲಗಿದ್ದ ನಾಯಿ ಮೇಲೆ ಆರೋಪಿ ವಾಜೀದ್ ದೊಡ್ಡ ಗಾತ್ರದ ಕಲ್ಲು ಎತ್ತಿಹಾಕಿ ಕೊಂದಿದ್ದ. ಬಳಿಕ ಲಗ್ಗೇಜ್ ಆಟೋಗೆ ಕಟ್ಟಿ ಎಳೆದೊಯ್ದ ವಿಡಿಯೋ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಮಾಜಿ ಸಚಿವೆ, ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮೇನಕಾ ಗಾಂಧಿ ಎಂಟ್ರಿಯಾಗಿದ್ದು, ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ 2023ರ ಸೆಕ್ಷನ್ 325 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯತಡೆಗಟ್ಟುವಿಕೆ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.

ಏನಿದು ಘಟನೆ?

ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಬಳಿ ಬೀದಿಯಲ್ಲಿ ಮಲಗಿದ್ದ ನಾಯಿ ಮೇಲೆ ಆಟೋ ಚಾಲಕ ವಾಜೀದ್ ಮೃಗೀಯ ವರ್ತನೆ ತೋರಿದ್ದ. ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಬೃಹತ್ ಕಲ್ಲು ಎತ್ತಿಹಾಕಿ ತೆರಳಿದ್ದ. ಜೀವನ್ಮರಣದ ನಡುವೆ ನರಳಾಡುತ್ತಿದ್ದ ನಾಯಿಯನ್ನು ಕಂಡು ಮತ್ತೆ ವಾಪಸ್ ಬಂದ ಆತ ತನ್ನ ಲೆಗೇಜ್ ಆಟೋ ಹಿಂಬದಿಗೆ ಕಟ್ಟಿ ರಸ್ತೆಯಲ್ಲೇ ಅಮಾನುಷವಾಗಿ ಎಳೆದೊಯ್ದಿದ್ದ. ಅದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದರು.

ಮನೇಕಾ ಗಾಂಧಿ ಕರೆ: ಸ್ಥಳೀಯರೊಬ್ಬರು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ ನಾಯಿ ವಿಡಿಯೋವನ್ನು ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮೇನಕಾ ಗಾಂಧಿ ನೋಡಿದ್ದಾರೆ. ವಿಡಿಯೋ ವೈರಲ್ ಆದ ಕೆಲವೇ ನಿಮಿಷಗಳಲ್ಲಿ ಮನೇಕಾ ಗಾಂಧಿ ಅವರು ಶಿವಮೊಗ್ಗ ಎಸ್‌ಪಿ ಮಿಥುನ್‌ಕುಮಾರ್, ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಅವರಿಗೆ ಕರೆ ಮಾಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net