ಎಎಪಿ ಶಾಸಕ ನರೇಶ್​ ಯಾದವ್​ ಬೆಂಗಾವಲು ಪಡೆ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ: ಓರ್ವ ಸಾವು

naresh yadav feb 12 2020
Published on

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ನರೇಶ್​ ಯಾದವ್​ ಅವರ ಬೆಂಗಾವಲು ಪಡೆ ಮೇಲೆ ಅಪರಿಚಿತರು ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ.
ದಕ್ಷಿಣ ದೆಹಲಿಯ ಅರುಣಾ ಅಸಫ್ ಅಲಿ ಮಾರ್ಗದಲ್ಲಿರುವ ದೇವಾಲಯದಿಂದ ಹಿಂದಿರುಗುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ದಾಳಿಯಿಂದ ಶಾಸಕ ನರೇಶ್​ ಯಾದವ್​ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.
ಆದರೆ ಗುಂಡಿನ ದಾಳಿಯಲ್ಲಿ ಎಎಪಿ ಕಾರ್ಯಕರ್ತ ಅಶೋಕ್​ ಮನ್​ಜಿ ಮೃತಪಟ್ಟಿದ್ದರೇ ಕಾರ್ಯಕರ್ತ ಹರೇಂದರ್​ ಜಿ ಗಾಯಗೊಂಡಿದ್ದಾರೆ.
ಇಬ್ಬರು ವ್ಯಕ್ತಿಗಳು ಬಂದು 4 ಸುತ್ತು ಗುಂಡು ಹಾರಿಸಿದರು. ಅವರು ನನ್ನನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆಯೇ ಎಂಬುದು ಗೊತ್ತಿಲ್ಲ. ಆದರೆ ದಾಳಿಕೋರರು ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡಿದ್ದರು. ಗುಂಡಿನ ದಾಳಿ ನಡೆಸಿ ಕತ್ತಲಲ್ಲಿ ಪರಾರಿಯಾದರು ಎಂದು ಶಾಸಕ ನರೇಶ್​ ಯಾದವ್​ ತಿಳಿಸಿದ್ದಾರೆ. ದೆಹಲಿ ಪೊಲೀಸರು ದಾಳಿ ನಡೆಸಿದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ದಾಳಿಕೋರರು ಎಎಪಿ ಶಾಸಕ ನರೇಶ್​ ಯಾದವ್​ ಅವರನ್ನು ಗುರಿಯಾಗಿಸಿಕೊಂಡಿರಲಿಲ್ಲ. ಬದಲಾಗಿ ಸ್ವಯಂ ಸೇವಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಇದ್ದ ಎಲ್ಲ ಸಿಸಿಟಿವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಡಿಸಿಪಿ ಇಂಗಿತ್​ ಪ್ರತಾಪ್​ಸಿಂಗ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net