

Mamta Kulkarni: ಜ.24ರಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿದ 90ರ ದಶಕದಲ್ಲಿ ಬಾಲಿವುಡ್ ಅಂಗಳದಲ್ಲಿ ಮಿಂಚಿ ಕಣ್ಮರೆಯಾಗಿದ್ದ ಹಾಟ್ ಬ್ಯೂಟಿ ಮಮತಾ ಕುಲಕರ್ಣಿ (52), 25 ವರ್ಷಗಳ ನಂತರ ಮಹಾಕುಂಭ ಮೇಳದಲ್ಲಿ ಭಾಗಿಯಾಗಿ, ಸನ್ಯಾಸಿನಿ ಆಗಲು ಇಚ್ಚಿಸಿದ್ದು ಅವರ ಅಭಿಮಾನಿಗಳನ್ನು ಭಾರೀ ಅಚ್ಚರಿಗೆ ದೂಡಿತ್ತು. ದೀಕ್ಷೆ ಪಡೆದ ಬೆನ್ನಲ್ಲೇ ಹೊಸ ಹೆಸರನ್ನೂ ಪಡೆದಿದ್ದ ನಟಿ, ದಿಢೀರ್ ಕಿನ್ನರ ಅಖಾಡದಿಂದ ಉಚ್ಛಾಟನೆಗೊಂಡ ಸುದ್ದಿ ಕೂಡ ಅವರ ಅಭಿಮಾನಿಗಳಲ್ಲಿ ಅಷ್ಟೇ ಅಚ್ಚರಿಯನ್ನು ಉಂಟುಮಾಡಿತು. ಈ ವಿಷಯ ಇಂದಿಗೂ ಚರ್ಚೆಯಲ್ಲಿದೆ.
ಮಹಾಕುಂಭ ಮೇಳದಲ್ಲಿ ಭಾಗವಹಿಸಿ, ಸನ್ಯಾಸತ್ವ ಸ್ವೀಕರಿಸಲೆಂದೇ 25 ವರ್ಷಗಳ ಬಳಿಕ ಭಾರತಕ್ಕೆ ಮರಳಿದ್ದ ಮಮತಾ ಕುಲಕರ್ಣಿಗೆ ಇದೀಗ ಭಾರೀ ಮುಖಭಂಗ ಉಂಟಾಗಿದೆ. ಪಟ್ಟದಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ಮಮತಾ ಮುಂದಿನ ನಿಲುವೇನು ಎಂಬ ಪ್ರಶ್ನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕೆಲವೊಬ್ಬರು ಆಕೆಯ ಮುಂದೆ ಇರುವುದು ಬಾಲಿವುಡ್ಗೆ ಮರಳುವ ನಿರ್ಧಾರ. 25 ವರ್ಷಗಳಿಂದ ಕಣ್ಮರೆಯಾಗಿದ್ದ ನಟಿ, ಈಗ ಬಾಲಿವುಡ್ನತ್ತ ಮುಖ ಮಾಡುವ ಸಾಧ್ಯತೆಯಿದೆ ಎಂದೇ ಅಭಿಪ್ರಾಯಿಸಿದ್ದರು. ಆದರೆ, ಈ ಎಲ್ಲಾ ವದಂತಿಗಳಿಗೂ ಸ್ವತಃ ಮಮತಾ ಸ್ಪಷ್ಟನೆ ನೀಡಿದ್ದಾರೆ.
ಇಲ್ಲಿಂದ ಇನ್ನೂ ಮುಂದುವರಿಯುವುದು ಬೇಡ ಎಂದು ಆಕೆಯನ್ನು ಹೊರಗಟ್ಟಿದ ಕಿನ್ನರ ಅಖಾಡ, ಮಮತಾಗೆ ರಾಜೀನಾಮೆ ಕೊಡುವಂತೆ ತಿಳಿಸಿತ್ತು. ಆದರೆ, ಸಮಯ ತೆಗೆದುಕೊಂಡಿದ್ದ ಮಮತಾ ಕುಲಕರ್ಣಿ ಕಡೆಗೂ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ಘೋಷಿಸಿದ್ದಾರೆ. ವಿಡಿಯೋ ಮೂಲಕ ಮಾತನಾಡಿರುವ ಮಮತಾ, "ಮಹಾಮಂಡಲೇಶ್ವರ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ರವಾನಿಸಿದ್ದೇನೆ. ಇಲ್ಲಿಂದ ನನ್ನ ಆಧ್ಯಾತ್ಮಿಕ ಪ್ರಯಾಣ ಸಾಗಲಿದೆ. ಸಾಧ್ವಿಯಾಗಿ ನಾನು ನನ್ನ ಬದುಕನ್ನು ಮುಂದುವರಿಸುತ್ತೇನೆ" ಎಂದು ಹೇಳಿದ್ದಾರೆ.
ವೀಡಿಯೊದಲ್ಲಿ, "ನಾನು ಕಿನ್ನರ ಅಖಾಡದ ಮಹಾಮಂಡಲೇಶ್ವರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಬಾಲ್ಯದಿಂದಲೂ ಸಾಧ್ವಿಯಾಗಿದ್ದೇನೆ ಮತ್ತು ಮುಂದಿನ ದಿನಗಳಲ್ಲಿಯೂ ಹಾಗೆಯೇ ಬದುಕುತ್ತೇನೆ" ಎಂದಿದ್ದಾರೆ.
25 ವರ್ಷಗಳಿಂದ ಭಾರತದತ್ತ ತಿರುಗಿ ನೋಡದ ಹಾಟ್ ಬ್ಯೂಟಿ, 90ರ ದಶಕದಲ್ಲಿ ಬಾಲಿವುಡ್ನಲ್ಲಿ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ. ಅಂದು ಬಾಲಿವುಡ್ ಅಂಗಳದಲ್ಲಿ ಉತ್ತುಂಗದಲ್ಲಿದ್ದ ಮಮತಾ, ಉದ್ಯಮದಲ್ಲಿ ತಮ್ಮದೇ ಆದ ಹೆಸರನ್ನು ಸ್ಥಾಪಿಸಿಕೊಂಡಿದ್ದರು. ಯಾರ ಹೇಳಿಕೆಗೂ, ಟೀಕೆಗೂ ಬಗ್ಗದ ನಟಿ, ತಮ್ಮ ನೇರನುಡಿ, ಮುಕ್ತ ಮನಸ್ಸಿನ ಮಾತುಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರು. ಜಾಲತಾಣದ ಅಸ್ತಿತ್ವವಿಲ್ಲದ ಆ ಸಮಯದಲ್ಲೇ ಸಂದರ್ಶನಗಳಲ್ಲಿ ಆಕೆ ಕೊಡುತ್ತಿದ್ದ ಒಂದೊಂದು ಹೇಳಿಕೆಗೆಳು ಇಡೀ ಚಿತ್ರರಂಗವನ್ನೇ ನಡುಗಿಸುತ್ತಿತ್ತು. ಸ್ಟಾರ್ ನಟ-ನಟಿಯರ ಬಗ್ಗೆ ಮಮತಾ ಕುಲಕರ್ಣಿ ಬಿಚ್ಚುನುಡಿಗಳು ಅಂದು ಭಾರೀ ಸಂಚಲನ ಸೃಷ್ಟಿಸುತ್ತಿತ್ತು,(ಏಜೆನ್ಸೀಸ್).