ಪಶ್ಚಿಮ ಬಂಗಾಳದಲ್ಲಿ ಪತ್ರಕರ್ತರಿಗೆ 10 ಲಕ್ಷ ರೂ.ವಿಮಾ ಸೌಲಭ್ಯ; ಇತ್ತೀಚೆಗಷ್ಟೇ ಮಾಧ್ಯಮದವರಿಗೆ ಬೈದಿದ್ದ ದೀದಿ ಅರ್ಜೆಂಟ್​ ಆಗಿ ವಿಡಿಯೋ ಕಾನ್ಫರೆನ್ಸ್ ಮಾಡಿದ್ದೇಕೆ?

Mamata Banerjee
Published on

ಕೋಲ್ಕತ್ತ: ಕರೊನಾ ವೈರಸ್​ಗೆ ಸಂಬಂಧಪಟ್ಟಂತೆ ಪಾಸಿಟಿವ್​ ಸುದ್ದಿಗಳನ್ನು ಮಾತ್ರ ಕೊಡಿ. ಋಣಾತ್ಮಕ ಸುದ್ದಿಗಳು, ಹೆದರಿಸುವ ವರದಿಗಳಿಂದ ಜನರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹೆಚ್ಚು ಆತಂಕ ಪಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಎಲ್ಲ ಪತ್ರಕರ್ತರಿಗೂ ಸೂಚನೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಎಲ್ಲ ಮಾಧ್ಯಮಗಳ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ ಮಮತಾ ಬ್ಯಾನರ್ಜಿ, ಸರ್ಕಾರದೊಂದಿಗೆ ಸೇರಿ ಕೆಲಸ ಮಾಡಿ. ಜನರಲ್ಲಿ ದಿಗ್ಭ್ರಮೆ ಸೃಷ್ಟಿಸಬೇಡಿ ಎಂದಿದ್ದಾರೆ.

ಸದ್ಯ ಧಾರಾವಾಹಿಗಳ ಶೂಟಿಂಗ್​ ನಡೆಯುತ್ತಿಲ್ಲದ ಕಾರಣ ಅವೂ ಪ್ರಸಾರವಾಗುತ್ತಿಲ್ಲ. ಹೊಸ ಸಿನಿಮಾಗಳು, ರಿಯಾಲಿಟಿ ಶೋಗಳು ಯಾವವೂ ಇಲ್ಲ. ಹೀಗಿರುವಾಗ ಜನರು ಯಾವಾಗಲೂ ಸುದ್ದಿ ವಾಹಿನಿಗಳನ್ನೇ ನೋಡುತ್ತಿರುತ್ತಾರೆ. ಈಗಂತೂ ಕೊವಿಡ್​​ ಬಿಟ್ಟು ಬೇರೇನೂ ಪ್ರಸಾರ ಆಗುತ್ತಿಲ್ಲ. ಮಾಧ್ಯಮಗಳಲ್ಲಿ ಕರೊನಾ ಬಗ್ಗೆ ಆತಂಕ ಸೃಷ್ಟಿಸುವಂತೆ ಸುದ್ದಿ ಬಿತ್ತರಿಸಬೇಡಿ. ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ವರದಿಗಳನ್ನು ನೋಡಿದರೆ ನಮಗೆ ಭಯವಾಗುತ್ತದೆ ಎಂದು ಅನೇಕರು ನನ್ನಲ್ಲಿ ಹೇಳಿಕೊಂಡಿದ್ದಾರೆ. ಹಾಗಾಗಿ ಜನರ ಮಾನಸಿಕ ಆರೋಗ್ಯ ಹಾಳಾಗುವ ಸುದ್ದಿಗಳನ್ನು ಪ್ರಕಟಿಸಬೇಡಿ ಎಂದು ಮಮತಾ ಬ್ಯಾನರ್ಜಿ ಜರ್ನಲಿಸ್ಟ್​​ಗಳಿಗೆ ಹೇಳಿದ್ದಾರೆ.

ಮಾಧ್ಯಮದವರು ಈ ಸಾಂಕ್ರಾಮಿಕ ಕಾಯಿಲೆಯ ಅಪಾಯದ ನಡುವೆಯೂ 24ಗಂಟೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಸಂಬಳವೂ ಇಲ್ಲ. ಅವರ ಶ್ರಮವನ್ನು ಶ್ಲಾಘಿಸಲೇಬೇಕು. ಮಾನ್ಯತೆ ಪಡೆದ ಎಲ್ಲ ಪತ್ರಕರ್ತರಿಗೆ ವಿಮಾ ಸೌಲಭ್ಯವನ್ನು 10 ಲಕ್ಷ ರೂ.ಗೆ ವಿಸ್ತರಿಸಲಾಗುವುದು ಎಂದು ಘೋಷಿಸಿದರು.

ಪತ್ರಕರ್ತರಿಗೆ ಅನೇಕ ಮಾಹಿತಿ ಗೊತ್ತಿರುತ್ತದೆ. ಪರಿಸ್ಥಿತಿಯ ಬಗ್ಗೆ ಸರಿಯಾದ ಅರಿವು ಇರುತ್ತದೆ. ಹಾಗಾಗಿ ಅವರು ಸರ್ಕಾರದ ಜತೆಗೂಡಿ ಕೆಲಸ ಮಾಡಬೇಕು. ಅವರಿಂದ ನಮಗೆ ತುಂಬ ಅನುಕೂಲವಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ಲಾಕ್​ಡೌನ್​ ಸಂದರ್ಭದಲ್ಲಿ ಯಾರೇ ನಿಯಮ ಉಲ್ಲಂಘನೆ ಮಾಡಿದರೂ, ಬೇರೆ ದುಷ್ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೂ ಅವರ ಬಗ್ಗೆ ಮಾಹಿತಿಯನ್ನು ಕೂಡಲೇ ಸರ್ಕಾರಕ್ಕೆ ತಿಳಿಸಿ ಎಂದು ಹೇಳಿದ್ದಾರೆ.

ಹಾಗೇ ಸಾವಿನ ಸಂಖ್ಯೆಯನ್ನು ತಪ್ಪಾಗಿ ಕೊಡಬೇಡಿ ಎಂದು ಪತ್ರಕರ್ತರಿಗೆ ಸೂಚಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಇದೇ ಕಾರಣಕ್ಕೆ ಮಾಧ್ಯಮದವರ ವಿರುದ್ಧ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದರು. ಸಾವಿನ ಸಂಖ್ಯೆಯಲ್ಲಿ ತಪ್ಪಾಗಿದೆ. ಎಲ್ಲಿಂದ ತಂದು ಕೊಡುತ್ತೀರಿ ಈ ಅಂಕಿಅಂಶವನ್ನು ಎಂದು ಬೈದಿದ್ದರು.

ಪತ್ರಕರ್ತರಿಗೆ ಪಶ್ಚಿಮಬಂಗಾಳ 10 ಲಕ್ಷ ರೂ.ನ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net