ಕೋಲ್ಕತದಲ್ಲಿ ಪರಿಸ್ಥಿತಿ ನಿರ್ವಹಿಸಲಾಗದೆ ಸೇನೆಯ ಮೊರೆ ಹೋದ ದೀದಿ

Modi didi
Published on

ಕೋಲ್ಕತ: ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಹರಿಹಾಯುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದಲ್ಲೀಗ ಪರಿಸ್ಥಿತಿಯನ್ನು ನಿರ್ವಹಿಸಲಾಗದೆ ಸೇನೆಯ ಮೊರೆ ಹೋಗಿದ್ದಾರೆ.

ಚಂಡಮಾರುತದ ಕಾರಣ ಅಸ್ತವ್ಯಸ್ತವಾಗಿರುವ ಪಶ್ಚಿಮ ಬಂಗಾಳದಲ್ಲಿ ಈಗ ಮೂಲಸೌಕರ್ಯಕ್ಕಾಗಿ ಜನರು ಬೀದಿಗಿಳಿದಿದ್ದಾರೆ. ಚಂಡಮಾರುತ ಅಪ್ಪಳಿಸಿ ಮೂರು ದಿನ ಕಳೆದರೂ ಸರ್ಕಾರ ಜನಜೀವನವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಿಲ್ಲವೆಂದು ಕೋಲ್ಕತದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ.

ಕೋಲ್ಕತದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಮೂರು ದಿನವಾಗಿದೆ. ಇದನ್ನು ಮರುಸ್ಥಾಪಿಸಲು ಸರ್ಕಾರ ಮುಂದಾಗಿಲ್ಲ ಪ್ರತಿಭಟನಾಕಾರರು ದೂರಿದ್ದಾರೆ. ವಿದ್ಯುತ್ ಪೂರೈಕೆ ವಿಷಯವಾಗಿ ಕೋಲ್ಕತ ವಿದ್ಯುತ್ ಸರಬರಾಜು ನಿಗಮದೊಂದಿಗೆ ಮಾತಾಡಿದ್ದೇವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಏತನ್ಮಧ್ಯೆ, ಮೂಲಸೌಕರ್ಯ ಮರುಸ್ಥಾಪಿಸಲು ಸೇನೆಯ ನೆರವಿಗೆ ಅವರು ಮನವಿ ಮಾಡಿದ್ದಾರೆ. ಈ ಬೇಡಿಕೆಗೆ ಕೂಡಲೇ ಸ್ಪಂದಿಸಿರುವ ಭಾರತೀಯ ಸೇನೆ ತನ್ನ ತುಕಡಿಗಳನ್ನು ಕೊಲ್ಕತ್ತಕ್ಕೆ ರವಾನಿಸಿದೆ.

ರಾಜ್ಯಕ್ಕೆ ಮೇ 26ರವರೆಗೆ ಶ್ರಮಿಕ ವಿಶೇಷ ರೈಲು ಕಳುಹಿಸದಿರುವಂತೆ ಅವರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. ರಾಜ್ಯದ ಅಧಿಕಾರಿಗಳೆಲ್ಲರೂ ಚಂಡಮಾರುತ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರಣ ರಾಜ್ಯಕ್ಕೆ ಬರುವ ವಲಸಿಗರ ಮೇಲೆ ನಿಗಾವಹಿಸುವುದು ಕಷ್ಟವಾಗುತ್ತದೆ ಎಂದು ಮಮತಾ ತಿಳಿಸಿದ್ದಾರೆ.

ಈ ಮಧ್ಯೆ, ಚಂಡಮಾರುತದ ಕಾರಣ ಸತ್ತವರ ಸಂಖ್ಯೆ 86ಕ್ಕೆ ಏರಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಪರಿಹಾರ ಕಾರ್ಯ ಚುರುಕುಗೊಳಿಸಲು ಎನ್‌ಡಿಆರ್‌ಎಫ್ ನ 10 ಹೆಚ್ಚುವರಿ ತಂಡಗಳು ಪಶ್ಚಿಮ ಬಂಗಾಳಕ್ಕೆ ಆಗಮಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net