ಬಾಂಗ್ಲಾಕ್ಕೆ ಶಾಂತಿಪಾಲನಾ ಪಡೆ ಕಳುಹಿಸಬೇಕು; UN ಸಹಾಯ ಕೋರುವಂತೆ ಕೇಂದ್ರಕ್ಕೆ Mamata Banerjee ಮನವಿ

Untitled design - 2024-12-02T165600.016
Published on

ಕೋಲ್ಕತಾ: ಬಾಂಗ್ಲಾದೇಶದಲ್ಲಿ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಇದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee), ನೆರೆಯ ದೇಶದಲ್ಲಿ ಶಾಂತಿ ನೆಲೆಸಲು ವಿಶ್ವಸಂಸ್ಥೆಯನ್ನು ಸಂಪರ್ಕಿಸುವಂತೆ ಸೋಮವಾರ(ಡಿಸೆಂಬರ್​​ 2) ಕೇಂದ್ರವನ್ನು ಒತ್ತಾಯಿಸಿದರು. ಜತೆಗೆ ಬಾಂಗ್ಲಾದೇಶದಲ್ಲಿ ಶೋಷಣೆಗೆ ಒಳಗಾಗಿರುವ ಭಾರತೀಯರನ್ನು ಮರಳಿ ಕರೆತರಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಭಾರತದ ಸಂಸತ್ತಿನ ನಿಲುವನ್ನು ವಿದೇಶಾಂಗ ಸಚಿವರು ತಿಳಿಸಬೇಕು. ಒಂದು ವೇಳೆ ಪ್ರಧಾನಿ ಮೋದಿ ಅವರು ಈ ಕೆಲಸ ಮಾಡಲು ಲಭ್ಯವಿಲ್ಲದಿದ್ದರೆ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ವಿದೇಶಾಂಗ ಸಚಿವರು(ಜೈಶಂಕರ್​) ಈ ಬಗ್ಗೆ ಪ್ರಸ್ತಾಪಿಸಲಿ ಎಂದು ಹೇಳಿದರು.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ದೇಶದ ಫೆಡರಲ್ ರಚನೆಯಲ್ಲಿ ಬಂಗಾಳವು ಒಂದು ರಾಜ್ಯವಾಗಿರುವುದರಿಂದ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸುವುದು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿದರು. ಅಲ್ಲದೆ ಇತ್ತೀಚಿಗಿನ ಬೆಳವಣಿಗೆಗಳು ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ಅನೇಕ ಜನರ ಸಂಬಂಧಿಕರು ವಿವರಿಸಿದ ಅನುಭವಗಳು, ನಮ್ಮ ಕಡೆಗೆ ಬರುವ ಜನರನ್ನು ಬಂಧಿಸುವುದು ಮತ್ತು ಇಸ್ಕಾನ್ ಪ್ರತಿನಿಧಿಗಳೊಂದಿಗೆ ನನ್ನ ಸಂಭಾಷಣೆಗಳು ಈ ಸದನದಲ್ಲಿ ನಾನು ಈ ಹೇಳಿಕೆಯನ್ನು ನೀಡುವಂತೆ ಒತ್ತಾಯಿಸಿವೆ ಎಂದರು.

ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಲು ಅಧಿಕಾರ ವ್ಯಾಪ್ತಿಯನ್ನು ಮೀರಿದ್ದೇನೆ ಎಂದು ಸ್ಪಷ್ಟಪಡಿಸಿದ ಬಳಿಕ ಮಮತಾ ಬ್ಯಾನರ್ಜಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಢಾಕಾ ಅಧಿಕಾರಿಗಳೊಂದಿಗೆ ಮತ್ತು ಅಗತ್ಯವಿದ್ದರೆ ವಿಶ್ವಸಂಸ್ಥೆಗೆ ಸಮಸ್ಯೆಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಅಗತ್ಯವಿದ್ದಲ್ಲಿ, ಬಾಂಗ್ಲಾದೇಶದ (ಮಧ್ಯಂತರ) ಸರ್ಕಾರದೊಂದಿಗೆ ಮಾತನಾಡಿದ ನಂತರ, ಸಹಜ ಸ್ಥಿತಿಗೆ ಮರಳಲು ಸಹಾಯ ಮಾಡಲು ಅಂತಾರಾಷ್ಟ್ರೀಯ ಶಾಂತಿಪಾಲನಾ ಪಡೆಯನ್ನು ಕಳುಹಿಸಬೇಕು ಎಂದು ಅವರು ಹೇಳಿದರು.

ಬಾಂಗ್ಲಾದೇಶದಲ್ಲಿ ಈ ಸ್ಥಿತಿಗೆ ಕಾರಣವೇನು

ನವೆಂಬರ್ 25 ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಪ್ರಮುಖ ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಯಿತು. ಅಂದಿನಿಂದ ಹಿಂಸಾಚಾರ ಮತ್ತು ಅಶಾಂತಿ ಪ್ರಾರಂಭವಾಗಿದೆ. ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ರಕ್ಷಣೆಗಾಗಿ ಕೆಲಸ ಮಾಡಲು ಪ್ರಸಿದ್ಧರಾಗಿದ್ದರು. ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಿದ್ದು, ಜಾಮೀನು ನಿರಾಕರಿಸಲಾಗಿತ್ತು. ಆತನ ಬಂಧನದ ನಂತರ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗಳು ಪ್ರಾರಂಭವಾದವು. ಆತನ ಬಿಡುಗಡೆಗೆ ಹಿಂದೂ ಸಮುದಾಯ ಒತ್ತಾಯಿಸಿದೆ.

ಚಿತ್ತಗಾಂಗ್ ನ್ಯಾಯಾಲಯದ ಹೊರಗೆ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಈ ಪ್ರತಿಭಟನೆಯಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರು ಇತ್ತೀಚೆಗೆ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಗಮನ ಸೆಳೆಯಲು ಮತ್ತು ಸಮುದಾಯಕ್ಕೆ ಬಲವಾದ ರಕ್ಷಣೆ ನೀಡುವಂತೆ ಒತ್ತಾಯಿಸಲು ಹಲವಾರು ಪ್ರತಿಭಟನೆಗಳನ್ನು ಆಯೋಜಿಸಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net