ನೈಟ್​ ಶಿಫ್ಟ್​ ಮುಗಿಸಿ ಮನೆಗೆ ಬಂದ ದಂಪತಿ ಶವವಾಗಿ ಪತ್ತೆ! ಇಬ್ಬರ ಕೈನಲ್ಲೂ ಇದ್ದ ವಸ್ತು ಒಂದೇ | Couple Dead

ವಿಜಯವಾಣಿ - 2025-05-01T163510.456
Published on

Couple Dead: ನರ್ಸ್​ಗಳಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಜಿಲ್ಲೆಯ ಕಣ್ಣೂರು ಮೂಲದ ದಂಪತಿ, ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ದುಬೈನ ಕುವೈತ್​ನಲ್ಲಿ ವರದಿಯಾಗಿದೆ.

ಮಲಯಾಳಿ ದಂಪತಿಗಳು ಪರಸ್ಪರ ಚಾಕು ಇರಿದುಕೊಂಡು ಸಾವನ್ನಪ್ಪಿದ ಸಂಗತಿ ಸದ್ಯ ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ಕಣ್ಣೂರು ಮೂಲದ, ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಜಬೀರ್ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಸೂರಜ್ ಮತ್ತು ರಕ್ಷಣಾ ಪಡೆಯಲ್ಲಿ ನರ್ಸ್ ಆಗಿರುವ ಸೂರಜ್​ ಪತ್ನಿ ಬಿನ್ಸಿ ಇಂದು (ಮೇ.01) ಬೆಳಗ್ಗೆ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಎಂದಿನಂತೆ ಇಬ್ಬರೂ ನೈಟ್​ ಶಿಫ್ಟ್​ ಮುಗಿಸಿ ಬೆಳಗ್ಗೆ ಫ್ಲಾಟ್‌ಗೆ ಮರಳಿದ್ದಾರೆ. ಮನೆಗೆ ಬಂದ ಕೆಲವೇ ಕೆಲವು ಗಂಟೆಗಳಲ್ಲಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅವರ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲಸಕ್ಕಾಗಿ ಆಸ್ಟ್ರೇಲಿಯಾಗೆ ಹೋಗುವ ತಯಾರಿಯಲ್ಲಿದ್ದ ದಂಪತಿ, ತಮ್ಮ ಮುಂದಿನ ದಿನಗಳನ್ನು ಸುಗಮಗೊಳಿಸಲು ಸಾಕಷ್ಟು ಪ್ರಯತ್ನಗಳಲ್ಲಿದ್ದರು ಎಂದು ತಿಳಿದುಬಂದಿದೆ.

ಹೀಗಿರುವಾಗಲೇ ನೈಟ್​ ಶಿಫ್ಟ್ ಮುಗಿಸಿ ಬಂದ ದಂಪತಿ ಪರಸ್ಪರ ಚಾಕು ಇರಿದುಕೊಂಡು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಮಾತನಾಡಿರುವ ನೆರೆಹೊರೆಯವರು, ಬೆಳಗ್ಗೆ ಅವರ ಮನೆಯಿಂದ ಜೋರಾದ ಧ್ವನಿ ಕೇಳಿಸಿತು. ಇಬ್ಬರ ಮಧ್ಯೆ ಯಾವುದೋ ವಿಷಯಕ್ಕೆ ಜಗಳ ನಡೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಮೃತದೇಹ ನೋಡಿದ ಸ್ಥಳದಲ್ಲಿ ಇಬ್ಬರ ಕೈಗಳಲ್ಲೂ ಚಾಕು ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿ ನಡುವಿನ ಗಲಾಟೆ ನಂತರ ಕಟ್ಟಡದ ಸೆಕ್ಯೂರಿಟಿಗೆ ಅವರ ರೂಮ್​ ಚೆಕ್ ಮಾಡುವಂತೆ ಸ್ಥಳೀಯರು ಹೇಳಿದ್ದರು. ಈ ವೇಳೆ ಇಬ್ಬರೂ ಮೃತಪಟ್ಟಿರುವುದು ದೃಢವಾಗಿದೆ. ಪೊಲೀಸರು ಮತ್ತು ವಿಧಿವಿಜ್ಞಾನ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಚಾಕು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದೆ. ದಂಪತಿಗಳ ಮಕ್ಕಳು ಭಾರತದಲ್ಲೇ ಉಳಿದಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net