ಮಾಲೂರು ಆಸ್ಪತ್ರೆಗೆ ಹೊಸ ಕಟ್ಟಡ ಭಾಗ್ಯ

mlr hospital
ಮಾಲೂರು ಸಾರ್ವಜನಿಕ ಆಸ್ಪತ್ರೆ.
Published on

ಎಂ.ವಿ.ರವೀಂದ್ರ ಮಾಲೂರು

ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ ಆಗಬೇಕೆನ್ನುವ ಈ ಭಾಗದ ಜನರ ಬಹುದಿನಗಳ ಕನಸು ನನಸು ಮಾಡಲು ರಾಜ್ಯಸರ್ಕಾರ ಮುಂದಾಗಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಗುರುವಾರ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ.

ಜಿಲ್ಲೆಯಲ್ಲಿ ಮಾಲೂರು ತಾಲೂಕು ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿದ್ದು, ನೂರಾರು ಕೈಗಾರಿಕೆಗಳು ತಲೆ ಎತ್ತಿವೆ. ಹೊರ ರಾಜ್ಯ, ಜಿಲ್ಲೆಯಿಂದ ಕಂಪನಿಗಳಲ್ಲಿ ಕೆಲಸ ಮಾಡಲು ಬಂದಿರುವವರ ಸಂಖ್ಯೆ ಹೆಚ್ಚಿದೆ. ಆರೋಗ್ಯದಲ್ಲಿ ಏರುಪೇರಾದರೆ ಬಹುತೇಕರು ಸರ್ಕಾರಿ ಆಸ್ಪತ್ರೆ ಅವಲಂಬಿಸಿದ್ದರು.

ಮಾಲೂರು ತಾಲೂಕು ಸಾರ್ವಜನಿಕ ಆಸ್ಪತ್ರೆ 1952ರಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಇಂದಿನವರೆಗೂ ಹಳೇ ಕಟ್ಟಡದಲ್ಲೇ ಕಾಲಕ್ಕೆ ತಕ್ಕಂತೆ ಸೌಕರ್ಯ ಅಳವಡಿಸಿಕೊಂಡು ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ವರ್ಷಗಳು ಕಳೆದಂತೆ ಹಳೇ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಿತ್ತು.

ರೋಗಿಗಳ ಸಂಖ್ಯೆ ಹೆಚ್ಚಾದಂತೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನವಾಗಿರಲಿಲ್ಲ. ಕಳೆದ ಜನವರಿಯಲ್ಲಿ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ನಗರದ ಆಸ್ಪತ್ರೆಗೆ ಭೇಟಿ ನೀಡಿದಾಗ, ಶಾಸಕ ಕೆ.ವೈ.ನಂಜೇಗೌಡ ಅವರು ಆಸ್ಪತ್ರೆಯ ಸ್ಥಿತಿಗತಿಯನ್ನು ಸಚಿವರ ಮುಂದಿಟ್ಟು, ಹೊಸ ಕಟ್ಟಡ ನಿರ್ಮಾಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಜತೆಗೆ ವೈದ್ಯರು, ಸಿಬ್ಬಂದಿ ಕೊರತೆ ಬಗ್ಗೆಯೂ ಗಮನಕ್ಕೆ ತಂದಿದ್ದರು. ಇದಕ್ಕೆ ಬೇಕಾಗಿರುವ ಜಾಗವೂ ಸಿದ್ಧವಾಗಿದೆ, ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದರು. ಜತೆಗೆ ಅಧಿವೇಶನದಲ್ಲೂ ಸರ್ಕಾರದ ಗಮನ ಸೆಳೆದಿದ್ದರು.

ಇದಕ್ಕೆ ಸ್ಪಂದಿಸಿರುವ ಸರ್ಕಾರವು ನೂತನ ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 41 ಕೋಟಿ ರೂ. ಮಂಜೂರು ಮಾಡಿ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದೆ.

ಅ.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲೂರಿಗೆ ಆಗಮಿಸುತ್ತಿದ್ದು, ಅಂದು ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆ ಮೂಲಕ ಮುಂದಿನ ಒಂದು ವರ್ಷದಲ್ಲಿ ಜನತೆಯ ನಿರೀೆ ಈಡೇರಲಿದ್ದು, ಸಂತಸ ಮೂಡಿಸಿದೆ.

* ಹಳೇ ಕಟ್ಟಡದಲ್ಲಿನ ಸಮಸ್ಯೆಗಳೇನು?

ನಿತ್ಯ ಸುಮಾರು 700-800 ಮಂದಿ ಹೊರರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. 50 ರಿಂದ 70 ಮಂದಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಸುಮಾರು 85 ಮಂದಿ ವೈದ್ಯರು, ಸಿಬ್ಬಂದಿ ಮಂಜೂರು ಆಗಿದ್ದರೂ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಆಸ್ಪತ್ರೆ ಆವರಣದೊಳಗೆ ಆಂಬುಲೆನ್ಸ್​ ಹೋಗಲು ಸಹ ಜಾಗವಿರಲಿಲ್ಲ. ತುರ್ತು ಚಿಕಿತ್ಸೆ ನೀಡಲು ಮೂವರು ತಜ್ಞ ವೈದ್ಯರ ಕೊರತೆ ಇದೆ. ಸ್ತ್ರೀರೋಗ, ಅರಿವಳಿಕೆ, ಮಕ್ಕಳ ತಜ್ಞರ ನೇಮಕವಾಗಬೇಕಿದೆ. ಡಿ ಗ್ರೂಪ್​ ಸಿಬ್ಬಂದಿ, ದ್ವೀತಿಯ ದರ್ಜೆ ಮತ್ತು ಪ್ರಥಮ ದರ್ಜೆ ಸಹಾಯಕ, ಫಾರ್ಮಸಿ ಅಧಿಕಾರಿ, ನೇತ್ರ ಪರೀಕ್ಷೆ, ರಕ್ತ ಪ್ರಯೋಗಾಲಯದಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ.

* ಬೆಳಕು ಚೆಲ್ಲಿದ್ದ "ವಿಜಯವಾಣಿ'

ಮಾಲೂರು ತಾಲೂಕು ಆಸ್ಪತ್ರೆಯಲ್ಲಿನ ಸಮಸ್ಯೆಗಳು ಬಗ್ಗೆ "ವಿಜಯವಾಣಿ' "ಸರ್ಕಾರಿ ಆಸ್ಪತ್ರೆಗಳ ಆರೋಗ್ಯ' ಶೀರ್ಷಿಕೆಯಲ್ಲಿ ಸರಣಿ ವರದಿ ಪ್ರಕಟಿಸಿ ಇಲ್ಲಿನ ಸಮಸ್ಯೆಯ ಬಗ್ಗೆಯೂ ಗಮನ ಸೆಳೆದಿತ್ತು. ಈ ಮೇರೆಗೆ ಶಾಸಕ ಕೆ.ವೈ.ನಂಜೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ರೋಗಿಗಳೊಂದಿಗೆ ಚರ್ಚಿಸಿದರು. ಆನಂತರ ಅಧಿಕಾರಿಗಳಿಂದ ಮಾಹಿತಿ ಪಡೆದು, ಆದೇ ಸಂದರ್ಭದಲ್ಲಿ ಸ್ಥಳಿಯರು ಸಹ ಹೊಸ ಕಟ್ಟಡ ಅಗತ್ಯವಿದೆ ಎಂದು ಶಾಸಕರ ಗಮನಕ್ಕೆ ತಂದಿದ್ದರು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ನೂತನ ಕಟ್ಟಡ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

* ಈಗಾಗಲೇ ಜಾಗ ಗುರುತು

ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಶಾಸಕ ಕೆ.ವೈ.ನಂಜೇಗೌಡ, ಕಂದಾಯ ಅಧಿಕಾರಿಗಳ ಮೇಲೆ ಒತ್ತಡ ತಂದು 10 ಎಕರೆ ಜಾಗ ಗುರುತು ಮಾಡಿದ್ದಾರೆ. ನಿರೀೆಯಂತೆ ಅನುದಾನ ಮಂಜೂರಿಗೆ ಅನುಮೋದನೆ ಸಿಕ್ಕಿದ್ದು, ಆದಷ್ಟು ಬೇಗ ಕೆಲಸ ಶುರುವಾಗಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಕೋಟ್​...

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​, ಸಚಿವರಾದ ದಿನೇಶ್​ ಗುಂಡೂರಾವ್​, ಬೈರತಿ ಸುರೇಶ್​ ಅವರ ಸಹಕಾರದಿಂದ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ರಾಜ್ಯದ ಯಾವುದೇ ಕ್ಷೇತ್ರಕ್ಕೆ ದೊರೆಯದಷ್ಟು ಅನುದಾನ ಮಾಲೂರಿಗೆ ಸಿಕ್ಕಿದೆ. ಬೇಕಾದರೆ ವಿರೋಧ ಪಕ್ಷದವರು ದಾಖಲೆ ತೆಗೆದು ನೋಡಿಕೊಳಲಿ.

- ಕೆ.ವೈ.ನಂಜೇಗೌಡ, ಶಾಸಕ, ಮಾಲೂರು.

null
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net