70 ವರ್ಷ ಕಾಂಗ್ರೆಸ್​ ಏನು ಮಾಡಿತೆಂದು ಕೇಳ್ತಾರೆ, ಈ ದೇಶ‌ ಕಟ್ಟಿದ್ದು‌ ನಾವೇ: ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

Mallikarjun Kharge Speech
Published on

ಮೈಸೂರು: ಎಪ್ಪತ್ತು ವರ್ಷ ಕಾಂಗ್ರೆಸ್​ ಏನು ಮಾಡಿತು ಎಂದು ಮೋದಿ ಕೇಳ್ತಾರೆ, ಈ ದೇಶ‌ ಕಟ್ಟಿದ್ದು‌ ನಾವೇ. ನಮ್ಮ ಹಳೆಯ ಯೋಜನೆಗಳಿಗೆ ಸುಣ್ಣ ಬಣ್ಣ ಹೊಡೆದು ತಮ್ಮ ಯೋಜನೆ ಪ್ರಚಾರ ಮಾಡ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬೃಹತ್​ ವೇದಿಕೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಬಳಿಕ ಖರ್ಗೆ ಅವರು ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ನಾನು ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ನಮ್ಮ ರಾಜ್ಯದ ಗ್ಯಾರಂಟಿಗಳು ಎಲ್ಲ ರಾಜ್ಯದಲ್ಲಿ ಪ್ರಚಾರ ಪಡೆದಿವೆ. ಕರ್ನಾಟಕ ಮಾದರಿಯಲ್ಲಿ ನಮಗೆ ಗ್ಯಾರಂಟಿ ಘೋಷಣೆ ಮಾಡಿ ‌ಅಂತ ಎಲ್ಲೆಡೆ ಕೇಳುತ್ತಿದ್ದಾರೆ ಎಂದು ಹೇಳಿದರು.

ಮೋದಿ ಈ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯ ಮಾಡಿದರು. ರಾಜ್ಯ ಆರ್ಥಿಕವಾಗಿ ಹಾಳಾಗುತ್ತೆ ಅಂದಿದ್ದಾರೆ. ಆದರೆ, ಯಾವುದೇ ಅಡಚಣೆ ಆಗದೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬೇಕಾದರೆ ಮೋದಿ ಅವರು ಇಂಟಲಿಜೆನ್ಸ್ ಮೂಲಕ ವರದಿ ತರಿಸಿಕೊಂಡು ನಾವು ಹೇಗೆ ಯೋಜನೆ ಅನುಷ್ಠಾನ ಮಾಡಿದ್ದೇವೆ ಎಂದು ನೋಡಲಿ ಎಂದರು.

70 ವರ್ಷ ಕಾಂಗ್ರೆಸ್ ಏನು ಮಾಡಿತು ಅಂತ ಮೋದಿ ಮತ್ತು ಅಮಿತ್​ ಶಾ ಕೇಳ್ತಾರೆ. ಈ ದೇಶ‌ವನ್ನು ಕಟ್ಟಿದ್ದು‌ ನಾವೇ. ನಮ್ಮ ಹಳೆ ಯೋಜನೆಗಳಿಗೆ ಸುಣ್ಣ ಬಣ್ಣ ಹೊಡೆದು ತಮ್ಮ ಯೋಜನೆ ಅಂತ ಹೇಳಿಕೊಳ್ತಿದ್ದಾರೆ ಎಂದು ಮೋದಿ ಹಾಗೂ ಅಮಿತ್​ ಶಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆದಿದೆ.

ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಸ್ತುತ 4 ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಉಳಿದ ಯುವನಿಧಿ ಯೋಜನೆಯನ್ನು ಶೀಘ್ರದಲ್ಲೇ ಚಾಲನೆ ನೀಡುತ್ತೇವೆ ಎಂದು ಖರ್ಗೆ ಅವರು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net