ಈದ್ ಮಿಲಾದ್ ಮೆರವಣಿಗೆಗೆ ಮಲೆನಾಡು ಸಜ್ಜು

amir ahamad circle
ಶಿವಮೊಗ್ಗದ ಅಮೀರ್ ಅಹಮ್ಮದ್ ವೃತ್ತದಲ್ಲಿ ಈದ್ ಮಿಲಾದ್ ಮೆರವಣಿಗೆ ನಿಮಿತ್ತ ಅಲಂಕಾರ ಮಾಡಿರುವುದು.
Published on

ಶಿವಮೊಗ್ಗ: ಹಿಂದು ಮಹಾಸಭಾ ಮತ್ತು ಓಂ ಗಣಪತಿ ರಾಜಬೀದಿ ಉತ್ಸವ ಹಾಗೂ ವಿಸರ್ಜನೆ ಬಳಿಕ ಪ್ರವಾದಿ ಮಹಮ್ಮದ್ ಪೈಗಂಬಬರರ ಜನ್ಮದಿನದ ಹಿನ್ನೆಲೆಯಲ್ಲಿ ಅ.1ರಂದು ಈದ್ ಮಿಲಾದ್ ಮೆರವಣಿಗೆಗೆ ಶಿವಮೊಗ್ಗ ಸಜ್ಜಾಗಿದೆ. ಕಳೆದ ಎರಡು ದಿನಗಳಿಂದ ಕೇಸರಿಮಯವಾಗಿದ್ದ ಶಿವಮೊಗ್ಗ ಇದೀಗ ಹಸಿರುಮಯವಾಗಿ ಬದಲಾಗಿದೆ.

ಸೆ.28ರಂದೇ ಈದ್ ಮಿಲಾದ್ ಹಬ್ಬ ಆಚರಣೆ ಮಾಡಿದ್ದ ಮುಸ್ಲಿಮರು ಹಿಂದು ಮಹಾಸಭಾ ಗಣಪತಿ ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ಅ.1ಕ್ಕೆ ಮುಂದೂಡಿದ್ದರು. ಇದೀಗ ಹಿಂದು ಮಹಾಸಭಾ ಮತ್ತು ಓಂ ಗಣಪತಿ ಎರಡೂ ಗಣಪತಿಗಳ ವಿಸರ್ಜನೆ ಬಳಿಕ ಮುಸ್ಲಿಮರು ಈದ್ ಮಿಲಾದ್ ಮೆರವಣಿಗೆಗೆ ಭರ್ಜರಿ ಸಿದ್ಧತೆ ನಡೆದಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ರಸ್ತೆ ಬದಿಗಳು, ಗಲ್ಲಿ ಗಲ್ಲಿಗಳಲ್ಲಿ ಹಸಿರು-ಬಿಳಿ ಬಂಟಿಂಗ್ಸ್, ಧ್ವಜಗಳನ್ನು ಅಳವಡಿಸುವ ಮೂಲಕ ಮೆರವಣಿಗೆಗೆ ಮೆರಗು ನೀಡಲು ತಯಾರಿ ನಡೆಸಿದ್ದಾರೆ. ಅಮೀರ್ ಅಹಮ್ಮದ್ ವೃತ್ತ ಸೇರಿದಂತೆ ವಿವಿಧ ಬಡಾವಣೆಗಳು, ವೃತ್ತಗಳಲ್ಲಿ ಹಸಿರು ಬಟ್ಟೆ ತೋರಣ ಕಟ್ಟಿ ಸಿಂಗರಿಸಿದ್ದಾರೆ.
ಅದರಲ್ಲೂ ಅಮೀರ್ ಅಹಮ್ಮದ್ ವೃತ್ತವನ್ನು ಸಂಪೂರ್ಣ ಹಸಿರುಮಯವಾಗಿಸಿ ಜಗಮಗಿಸುವ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಆಕರ್ಷಕ ದೀಪಗಳನ್ನು ಹಾಕಲಾಗಿದೆ. ಮಸೀದಿಯ ಮಿನಾರುಗಳು ರಾತ್ರಿ ವೇಳೆ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ. ಪ್ರಮುಖ ರಸ್ತೆಗಳ ದ್ವಾರದಲ್ಲಿ ಮಿನಾರು ಹಾಗೂ ಮಸೀದಿ ಮಾದರಿಯ ಕಲಾಕೃತಿಗಳನ್ನು ಇಡಲಾಗಿದೆ. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಆಯಕಟ್ಟಿನ ರಸ್ತೆ, ವೃತ್ತಗಳಲ್ಲಿ ಪೊಲೀಸ್ ಪಹರೆ ಹಾಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net