ನ್ಯೂಜಿಲೆಂಡ್​ ಸಂಸತ್ತಿನಲ್ಲಿ ಮೊಳಗಿದ ಮಲಯಾಳಂ! ಇದು ನಿಜವಾದ ಮಾತೃಭಾಷೆ ಪ್ರೇಮವೆಂದ ನೆಟ್ಟಿಗರು

Newzeland 6
Published on

ವೆಲ್ಲಿಂಗ್ಟನ್​​: ಕರೊನಾ ಸಾಂಕ್ರಾಮಿಕದ ನಡುವೆಯೂ ಅಮೆರಿಕ, ನ್ಯೂಜಿಲೆಂಡ್​ನಂತಹ ರಾಷ್ಟ್ರಗಳು ಚುನಾವಣೆ ನಡೆಸುತ್ತಿವೆ. ಇತ್ತೀಚೆಗೆ ನ್ಯೂಜಿಲೆಂಡ್​ನಲ್ಲಿ ಸಂಸತ್​ ಚುನಾವಣೆ ನಡೆದಿದ್ದು, ಹೊಸ ಸರ್ಕಾರ ರಚನೆಯಾಗಿದೆ. ಲೇಬರ್​ ಪಾರ್ಟಿಯ ಜಸಿಂದಾ ಅರ್ಡೆರ್ನ್​ ತಮ್ಮ ಎರಡನೇ ಅಧಿಕಾರಾವಧಿಯನ್ನು ಆರಂಭಿಸಿದ್ದಾರೆ. ವಿಶೇಷವೆಂದರೆ ಜಸಿಂದಾ ಅವರ ಸರ್ಕಾರದಲ್ಲಿ ನಮ್ಮ ಭಾರತದ ಅದರಲ್ಲೂ ನಮ್ಮ ನೆರೆ ರಾಜ್ಯವಾದ ಕೇರಳದ ಮಹಿಳೆಯೊಬ್ಬರು ಸಚಿವರಾಗಿ ಆಯ್ಕೆಯಾಗಿದ್ದಾರೆ.

ಕೇರಳ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್​ ನ್ಯೂಜಿಲೆಂಡ್​ ಸಂಸತ್ತಿಗೆ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಎರಡನೇ ಅವಧಿಯ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತಲೇ ಅವರ ಹಳೆಯದೊಂದು ವಿಡಿಯೋ ಭಾರೀ ಸುದ್ದಿ ಮಾಡಲಾರಂಭಿಸಿದೆ. ದೂರದ ನ್ಯೂಜಿಲೆಂಡ್​ನ ಸಂಸತ್​ನಲ್ಲಿ ಮಲಯಾಳಂನಲ್ಲಿ ಮಾತನಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ.

2017ರಲ್ಲಿ ಜೆಸಿಂದಾ ಅವರು ಮೊದಲನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಪ್ರಿಯಾಂಕಾ ಅವರನ್ನು ಸಂಸತ್​ಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆ ಸಮಯದಲ್ಲಿ ಮಾತನಾಡಿದ್ದ ಅವರು, ತಮ್ಮ ಮಾತೃಭಾಷೆ ಮಲಯಾಳಂನಲ್ಲಿ ಧನ್ಯವಾದ ಅರ್ಪಿಸಿದ್ದರು. ಇದೇ ಮೊದಲನೇ ಬಾರಿಗೆ ತಾವು ಮಾತೃಭಾಷೆಯಲ್ಲಿ ಮಾತನಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ದೂರದ ದೇಶದಲ್ಲಿದ್ದರೂ ಮಾತೃಭಾಷೆ ಬಗ್ಗೆ ಅವರಿಗಿರುವ ಅಭಿಮಾನದ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ಅವರು ಮಲಯಾಳಂ ಮಾತನಾಡುವ ವಿಡಿಯೋವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್​ ಪುರಿಯವರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಕೇರಳ ಮೂಲದವಾರದ ಪ್ರಿಯಾಂಕ ಅವರು ವಿದ್ಯಾಭ್ಯಾಸಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನ್ಯೂಜಿಲೆಂಡ್​ ತೆರಳಿ ಅಲ್ಲಿಯೇ ನೆಲೆ ನೆಲೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net