

ತಿರುವನಂತಪುರಂ: ಮಲಯಾಳಂನ ಖ್ಯಾತ ಚಿತ್ರ ನಿರ್ಮಾಪಕ ಶಫಿ((Shafi) ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಕಳೆದ ಕೆಲ ದಿನಗಳಿಂದ ಕೊಚ್ಚಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಾಹಿತಿ ಪ್ರಕಾರ ಶಫಿ ಅವರು ಪಾರ್ಶ್ವವಾಯುವಿಗೆ ಒಳಗಾದರು, ನಂತರ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲ ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರು ಶನಿವಾರ(ಜನವರಿ 25) ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಶಫಿ ಅವರ ನಿಜವಾದ ಹೆಸರು ರಶೀದ್ ಎಂ.ಹೆಚ್. ಆದರೆ ಸಿನಿಮಾರಂಗದಲ್ಲಿ ಅವರನ್ನು ಶಫಿ ಎಂದೇ ಕರೆಯಲಾಗುತ್ತಿತ್ತು. ಶಫಿ ಜನಪ್ರಿಯ ಚಿತ್ರಕಥೆಗಾರ, ನಿರ್ದೇಶಕ ರಫಿ ಅವರ ಕಿರಿಯ ಸಹೋದರ ಎಂದು ಕೆಲವೇ ಜನರಿಗೆ ತಿಳಿದಿದೆ. ಬಾಡಿಗಾರ್ಡ್‌ನಂತಹ ಚಿತ್ರಗಳನ್ನು ನಿರ್ಮಿಸಿದ ದಿವಂಗತ ನಿರ್ದೇಶಕ ಸಿದ್ದಿಕಿ ಅವರ ಚಿಕ್ಕಪ್ಪ.
90ರ ದಶಕದಲ್ಲಿ ಸಹಾಯಕ ನಿರ್ದೇಶಕರಾಗಿ ಶಫಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ನಂತರ 2001ರಲ್ಲಿ ‘ಒನ್ ಮ್ಯಾನ್ ಶೋ’ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರ ಇಂದಿಗೂ ತನ್ನ ಹೊಸತನದ ಕಥೆ ಹೇಳುವಿಕೆಗೆ ಹೆಸರುವಾಸಿಯಾಗಿದೆ.
ಚಲನಚಿತ್ರ ನಿರ್ಮಾಪಕ ಶಫಿ ಮಲಯಾಳಂ ಇಂಡಸ್ಟ್ರಿಯಲ್ಲಿ ಅಪ್ರತಿಮ ಹಾಸ್ಯ ಚಿತ್ರಗಳನ್ನು ನಿರ್ಮಿಸಲು ಹೆಸರುವಾಸಿಯಾಗಿದ್ದರು. ತಮ್ಮ ಕಾಮಿಡಿ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಸದಾ ನಗಿಸುತ್ತಿದ್ದರು. ಅವರ ವೃತ್ತಿ ಜೀವನದಲ್ಲಿ ಪುಲಿವಲ್ ಕಲ್ಯಾಣಂ, ಮಾಯಾವಿ, ತೊಮ್ಮನಂ ಮಕ್ಕಳಂ, ಟು ಕಂಟ್ರಿಸ್ ಸೇರಿದಂತೆ ಹಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದರು. ಹಿರಿಯ ಚಿತ್ರ ನಿರ್ಮಾಪಕರ ನಿಧನಕ್ಕೆ ಅಭಿಮಾನಿಗಳು ಕೂಡ ದುಃಖಿತರಾಗಿದ್ದಾರೆ. ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ.(ಏಜೆನ್ಸೀಸ್)