ಮಾಲಿವುಡ್‌ನಲ್ಲಿ ರಾಜೀನಾಮೆ ಪರ್ವ!: ನಟಿಯರಿಗೆ ಲೈಂಗಿಕ ಕಿರುಕುಳದ ಆರೋಪದಲ್ಲಿ ನಟ, ನಿರ್ದೇಶಕ

mollywood
Published on

ನೆರೆ ರಾಜ್ಯ ಕೇರಳ ಚಿತ್ರರಂಗದಲ್ಲಿ ಬಿರುಗಾಳಿ ಎದ್ದಿದೆ. ನಟಿಯರಿಗೆ ಲೈಂಗಿಕ ಕಿರುಕುಳ ಹಾಗೂ ಕಾಸ್ಟಿಂಗ್ ಕೌಚ್ ಸಂಬಂಧಿಸಿದಂತೆ ನ್ಯಾ.ಹೇಮಾ ನೇತೃತ್ವದ ಸಮಿತಿ ವರದಿ ನೀಡಿ, ಮಲಯಾಳಂ ಚಿತ್ರರಂಗದೊಳಗಿನ ಕತ್ತಲ ಜಗತ್ತನ್ನು ಬೆಳಕಿಗೆ ತಂದಿದೆ. ಇದರಿಂದ ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಸಂಕಷ್ಟ ಎದುರಿಸುವಂತಾಗಿದೆ. ತಮ್ಮ ವಿರುದ್ಧ ನಡೆದ ಲೈಂಗಿಕ ದೌರ್ಜನ್ಯಗಳ ಕುರಿತು ನಟಿಯರು ಒಬ್ಬೊಬ್ಬರೇ ಬಾಯಿ ಬಿಡುತ್ತಿದ್ದಾರೆ. ಬೆಂಗಾಲಿ ಮೂಲದ ನಟಿ ಶ್ರೀಲೇಖಾ ಮಿತ್ರ, ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. 2009ರಲ್ಲಿ ಶೂಟಿಂಗ್ ಸಮಯದಲ್ಲಿ ಸಿನಿಮಾದ ಕುರಿತು ಮಾತನಾಡುವುದಕ್ಕಾಗಿ ನನ್ನನ್ನು ಹೋಟೆಲ್‌ಗೆ ಕರೆದಿದ್ದರು. ಆಗ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾದರು. ಇದನ್ನು ಪ್ರತಿರೋಧಿಸಿ ಅಲ್ಲಿಂದ ಬಂದಿದ್ದೆ. ನನ್ನ ರೀತಿಯಲ್ಲಿ ಅನೇಕ ನಟಿಯರು ಈ ರೀತಿಯ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ರಂಜಿತ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸದ್ಯ ಕೇರಳ ಚಲನಚಿತ್ರ ಆಕಾಡೆಮಿ ಅಧ್ಯಕ್ಷರಾಗಿರುವ ರಂಜಿತ್ ರಾಜೀನಾಮೆ ನೀಡುವಂತೆ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೋರ್ವ ನಟ ಸಿದ್ದೀಖ್ ವಿರುದ್ಧ ಕೂಡ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಹೀಗಾಗಿ ಮಲಯಾಳಂ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಇಬ್ಬರು ಮುಂದೆ ತನಿಖೆ ಎದುರಿಸಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net